ಮುಲ್ತಾನ್: ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಇನಿಂಗ್ಸ್ ಹಾಗೂ 47 ರನ್‌ಗಳ ಅಂತರದಿಂದ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ 556 ರನ್ ಬಾರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ಇಂಗ್ಲೆಂಡ್, ಆತಿಥೇಯ ತಂಡದ ಬೌಲರ್‌ಗಳನ್ನು ಚೆಂಡಾಡಿತು. ಜೋ ರೂಟ್ 375 ಎಸೆತಗಳಲ್ಲಿ 17 ಬೌಂಡರಿಗಳೊಂದಿಗೆ 262 ರನ್ ಚಚ್ಚಿದರೆ, ಹ್ಯಾರಿ ಬೂಕ್ 322 ಎಸೆತಗಳಲ್ಲಿ 29 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 317 ರನ್ ಸಿಡಿಸಿ ಔಟಾದರು. ಒಟ್ಟಾರೆ 150 ಓವರ್‌ಗಳಲ್ಲಿ 7 ವಿಕೆಟ್‌ಗೆ 823 ರನ್ ಗಳಿಸಿದ್ದಾಗ ಡಿಕ್ಲೇರ್ ಘೋಷಿಸಿ ಮೊದಲ ಇನ್ನಿಂಗ್ಸ್‌ನಲ್ಲಿ 267 ರನ್ ಮುನ್ನಡೆ ಪಡೆಯಿತು.
2ನೇ ಇನ್ನಿಂಗ್ಸ್‌ನಲ್ಲಿ 4ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 152 ರನ್ ಗಳಿಸಿದ್ದ ಪಾಕಿಸ್ತಾನ ಅಂತಿಮ ದಿನವಾದ ಶುಕ್ರವಾರ 220 ರನ್‌ಗೆ ಸರ್ವಪತನ ಕಂಡು ತವರಿನಲ್ಲಿಯೇ ಭಾರೀ ಮುಖಭಂಗಕ್ಕೆ ಒಳಗಾಯಿತು. ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿಯೂ ಕೂಡ ವೈಟ್ ವಾಶ್ ಅವಮಾನ ಎದುರಿಸಿತ್ತು. ಇಂಗ್ಲೆಂಡ್ ವಿರುದ್ಧ ಸೋಲು ಕಾಣುವ ಮೂಲಕ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ ನಂತರವೂ ಇನ್ನಿಂಗ್ಸ್ ಸೋಲು ಎದುರಿಸಿದ ಮೊದಲ ತಂಡ ಎಂಬ ಕೆಟ್ಟ ಹಣೆಪಟ್ಟಿ ಪಾಕ್‌ಗೆ ಅಂಟಿಕೊಂಡಿತು.
ಇದನ್ನೂ ಓದಿ Ind vs Ban 3rd T20I: ನಾಳೆ ಭಾರತ-ಬಾಂಗ್ಲಾ ಅಂತಿಮ ಟಿ20
ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿ ಮಿಂಚಿದ್ದ ಆರಂಭಕಾರ ಅಬ್ದುಲ್ಲ ಶಫೀಕ್ ದ್ವಿತೀಯ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರು. ನಾಯಕ ಶಾನ್ ಮಸೂದ್(11) ಕೂಡ ವಿಫಲವಾದರು. ಮೊದಲ ಇನಿಂಗ್ಸ್‌ನಲ್ಲಿ ಅವರು ಕೂಡ ಶತಕ ದಾಖಲಿಸಿದ್ದರು. ದ್ವಿತೀಯ ಇನಿಂಗ್ಸ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಿದ ಆಟಗಾರರೆಂದರೆ ಆಘಾ ಸಲ್ಮಾನ್(63) ಮತ್ತು ಅಮರ್ ಜಮಾಲ್(55*) ಉಭಯ ಆಟಗಾರರು ಅರ್ಧಶತಕ ಬಾರಿಸಿದರು. ಮಾಜಿ ನಾಯಕ ಬಾಬರ್ ಅಜಂ ಎರಡೂ ಇನಿಂಗ್ಸ್‌ನಲ್ಲಿಯೂ ಕಳಪೆ ಬ್ಯಾಟಿಂಗ್ ನಡೆಸಿ ಟೀಕೆಗೆ ಗುರಿಯಾಗಿದ್ದಾರೆ.
ಇಂಗ್ಲೆಂಡ್ ಪರ ಮೊದಲ ಇನಿಂಗ್ಸ್‌ನಲ್ಲಿ ಯುವ ಆಟಗಾರ ಹ್ಯಾರಿ ಬ್ರೂಕ್ (Harry Brook) ತ್ರಿಶತಕ ಬಾರಿಸಿ ಮಿಂಚಿದರೆ, ಅನುಭವಿ ಆಟಗಾರ ಜೋ ರೂಟ್ (Joe Root) ದ್ವಿಶತಕ ಬಾರಿಸಿ ಮಿಂಚಿದ್ದರು. ಉಭಯ ಆಟಗಾರರು ನಾಲ್ಕನೇ ವಿಕೆಟ್‌ಗೆ ಬರೋಬ್ಬರಿ 454 ರನ್ ಜೊತೆಯಾಟವಾಡಿದ್ದರು. 1877 ರಲ್ಲಿ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಬ್ಯಾಟರ್‌ಗಳು ನಾಲ್ಕನೇ ವಿಕೆಟ್‌ಗೆ 450 ರನ್ ಜತೆಯಾಟವಾಡಿದ ದಾಖಲೆ ಬರೆದಿದ್ದರು. ಆಸ್ಟ್ರೇಲಿಯದ ಆಯಡಮ್ ವೋಗ್ಸ್ ಮತ್ತು ಶಾನ್ ಮಾರ್ಷ್ 449 ರನ್ ಗಳಿಸಿದ್ದು ಇದುವರೆಗಿನ ಅತ್ಯುತ್ತಮವಾಗಿತ್ತು. ಅವರು 2015 ರಲ್ಲಿ ಹೋಬರ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಈ ದಾಖಲೆಯ ಸ್ಕೋರ್ ಗಳಿಸಿದ್ದರು.
ಬ್ರೂಕ್ 322 ಎಸೆತಗಳಲ್ಲಿ 317 ರನ್ ಮಾಡಿದರು. ಈ ಇನ್ನಿಂಗ್ಸ್ ನಲ್ಲಿ 29 ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿದರು. ಜೋ ರೂಟ್ ಅವರು 375 ಎಸೆತಗಳಲ್ಲಿ 262 ರನ್ ಗಳಿಸಿದರು. ಇಂಗ್ಲೆಂಡ್ ಪರ ದ್ವಿತೀಯ ಇನಿಂಗ್ಸ್ ಬೌಲಿಂಗ್‌ನಲ್ಲಿ ಸ್ಪಿನ್ನರ್ ಜಾಕ್ ಲೀಚ್ 30 ರನ್‌ಗೆ 4 ವಿಕೆಟ್ ಕಿತ್ತರು. ಉಳಿದಂತೆ ಬ್ರೈಡನ್ ಕಾರ್ಸೆ ಮತ್ತು ಗಸ್ ಅಟ್ಕಿನ್ಸನ್ ತಲಾ 2 ವಿಕೆಟ್ ಪಡೆದರು. ಇತ್ತಂಡಗಳ ನಡುವಣ 2ನೇ ಟೆಸ್ಟ್ ಪಂದ್ಯ ಅಕ್ಟೋಬರ್ 15 ರಂದು ಇದೇ ಮೈದಾನದಲ್ಲಿ ನಡೆಯಲಿದೆ.