ಗಾಲೆ(ಶ್ರೀಲಂಕಾ): ಆತಿಥೇಯ ಶ್ರೀಲಂಕಾವನ್ನು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆರು ವಿಕೆಟ್ ಗಳಿಂದ ಮಣಿಸಿರುವ ಇಂಗ್ಲೆಂಡ್ ತಂಡ ಸರಣಿಯನ್ನು 2-0 ಅಂತರದಿಂದ ಜಯಿಸಿ ಕ್ಲೀನ್ ಸ್ವೀಪ್ ಸಾಧಿಸಿದೆ.
ಶ್ರೀಲಂಕಾ ನೆಲದಲ್ಲಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಜಯಿಸಿರುವ 2ನೇ ಪ್ರವಾಸಿ ತಂಡ ಎನಿಸಿಕೊಂಡಿರುವ ಇಂಗ್ಲೆಂಡ್ ತಂಡ ಭಾರತದ ದಾಖಲೆಯನ್ನು ಸರಿಗಟ್ಟಿದೆ. ಜೋ ರೂಟ್ ಅವರ ಶತಕ ಹಾಗೂ ಆಲ್ ರೌಂಡ್ ಪ್ರಯತ್ನದಿಂದಾಗಿ ಇಂಗ್ಲೆಂಡ್ ಗೆಲುವಿನ ನಗೆ ಬೀರಿದೆ.
ಆಲ್ ರೌಂಡರ್ ಡೊಮ್ ಸಿಬ್ಲೆ (56 ರನ್) ಹಾಗೂ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಜೋಸ್ ಬಟ್ಲರ್(46 ರನ್) ಔಟಾಗದೆ ಬ್ಯಾಟಿಂಗ್ ನಡೆಸಿ 5ನೇ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 75 ರನ್ ಸೇರಿಸಿದರು.
ಟೆಸ್ಟ್ ಕ್ರಿಕೆಟ್ ನಲ್ಲಿ 9ನೇ ಗೆಲುವು ದಾಖಲಿಸಿದ ಇಂಗ್ಲೆಂಡ್ ತಂಡ ಭಾರತದ ಗೆಲುವಿನ ದಾಖಲೆ ಸರಿಗಟ್ಟಿತು. ಶ್ರೀಲಂಕಾದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕಿಂತ ಉತ್ತಮ ಗೆಲುವಿನ ದಾಖಲೆ ನಿರ್ಮಿಸಿದೆ. ಇಂಗ್ಲೆಂಡ್ ಲಂಕಾದಲ್ಲಿ ಆಡಿರುವ 18 ಪಂದ್ಯ ಗಳಲ್ಲಿ 9ರಲ್ಲಿ ಜಯ ಸಾಧಿಸಿದರೆ, ಭಾರತ 9 ಪಂದ್ಯಗಳನ್ನು ಗೆಲ್ಲಲು 24 ಪಂದ್ಯಗಳಲ್ಲಿ ಆಡಿತ್ತು.
ಇಂಗ್ಲೆಂಡ್ ತಂಡ ಶ್ರೀಲಂಕಾದಲ್ಲಿ ಸತತ ಐದನೇ ಬಾರಿ ಟೆಸ್ಟ್ ಕ್ರಿಕೆಟ್ ನಲ್ಲಿ ಜಯ ದಾಖಲಿಸಿದೆ. ಜೋ ರೂಟ್ ಬಳಗ 2012ರ ಎಪ್ರಿಲ್ ನಿಂದ ದ್ವೀಪರಾಷ್ಟ್ರದಲ್ಲಿ ಟೆಸ್ಟ್ ಪಂದ್ಯವನ್ನು ಸೋತಿಲ್ಲ.