ಅಹಮದಾಬಾದ್: ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಜೋ ರೂಟ್, ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇತ್ತೀಚಿನ ವರದಿ ಪ್ರಕಾರ, ಪ್ರವಾಸಿ ಇಂಗ್ಲೆಂಡ್ ಎರಡು ವಿಕೆಟ್ ನಷ್ಟಕ್ಕೆ 22 ಗಳಿಸಿ ಹೆಣಗಾಡುತ್ತಿದೆ.
ಸರಣಿ ಸಮಬಲಗೊಳಿಸಲು ಇಂಗ್ಲೆಂಡ್ ಈ ಪಂದ್ಯ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿರುವ ಭಾರತ ಕ್ರಿಕೆಟ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ನಲ್ಲಿ ಸ್ಥಾನ ಭದ್ರಪಡಿಸುವ ಹಾದಿಯಲ್ಲಿದೆ. ಇಂಗ್ಲೆಂಡ್ ಎದುರಿನ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ನಲ್ಲಿ ಡ್ರಾ ಮಾಡಿಕೊಂಡರೂ ಭಾರತದ ಕನಸು ನನಸಾಗಲಿದೆ.
ಭಾರತ ತಂಡದಲ್ಲಿ ಒಂದು ಬದಲಾವಣೆ ತರಲಾಗಿದ್ದು, ವೈಯಕ್ತಿಕ ಕಾರಣಗಳಿಂದಾಗಿ ರಜೆಯಲ್ಲಿ ತೆರಳಿರುವ ಜಸ್ಪ್ರೀತ್ ಬೂಮ್ರಾ ಸ್ಥಾನಕ್ಕೆ ಯುವ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಇಂಗ್ಲೆಂಡ್ ತಂಡದಲ್ಲಿ ಜೋಫ್ರಾ ಆರ್ಚರ್ ಹಾಗೂ ಸ್ಟುವರ್ಟ್ ಬ್ರಾಡ್ ಅವರನ್ನು ಕೈಬಿಡಲಾಗಿದ್ದು, ಡ್ಯಾನ್ ಲಾರೆನ್ಸ್ ಹಾಗೂ ಡಾಮ್ ಬೆಸ್ ತಂಡವನ್ನು ಸೇರಿದ್ದಾರೆ.