ಲಖನೌ: ವಿಶ್ವಕಪ್-2023 ಟೂರ್ನಿಯಲ್ಲಿ ಭಾರತದ ಇಂಗ್ಲೆಂಡ್ ವಿರುದ್ಧ ಅಮೋಘ ಗೆಲುವು ಸಾಧಿಸುವ ಮೂಲಕ ಸತತ 6 ಪಂದ್ಯ ಗೆದ್ದಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಹೈವೋಲ್ಟೇಜ್ ಪಂದ್ಯದಲ್ಲಿ ರೋಹಿತ್ ಪಡೆಯ ಅಬ್ಬರಕ್ಕೆ ಹಾಲಿ ಚಾಂಪಿಯನ್ ಆಂಗ್ಲರು 100 ರನ್ಗಳ ಹೀನಾಯ ಸೋಲು ಅನುಭವಿಸಿದರು.
ಆಂಗ್ಲರನ್ನು 100 ರನ್ಗಳಿಂದ ಮಣಿಸಿದ ಭಾರತಕ್ಕೆ ವಿಶ್ವಕಪ್ನಲ್ಲಿ ಇದು ದಾಖಲೆಯ ಜಯವಾಗಿದೆ. ಈ ಗೆಲುವಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇಂಗ್ಲೆಂಡ್ 5ನೇ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದಿದೆ. ಅಲ್ಲದೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿಶ್ವಕಪ್ ಟೂರ್ನಿಯಿಂದಲೇ ಹೊರಗುಳಿದಿದೆ.
230 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಭಾರತದ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿತು. 34.5 ಓವರ್ಗಳಲ್ಲಿ 129 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಜೋ ರೂಟ್, ಬೆನ್ ಸ್ಟೋಕ್ಸ್, ಮಾರ್ಕ್ ವುಡ್ ಶೂನ್ಯಕ್ಕೆ ಔಟಾದರು. ಬೈರ್ಸ್ಟೋ 14, ಮಲನ್ 16, ನಾಯಕ ಬಟ್ಲರ್ 10, ಮೋಯಿನ್ ಅಲಿ 15, ವೋಕ್ಸ್ 10 ಹಾಗೂ ಲಿವಿಂಗ್ಸ್ಟೋನ್ 27 ರನ್ ಗಳಿಸಿದರು.
ಭಾರತದ ಪರ ಮೊಹಮ್ಮದ್ ಶಮಿ 4 ವಿಕೆಟ್ ಕಬಳಿಸಿದರು. ಜಸ್ಪ್ರೀತ್ ಬುಮ್ರಾ 3, ಕುಲ್ದೀಪ್ ಯಾದವ್ 2 ಹಾಗೂ ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದು ಮಿಂಚಿದರು. ಭಾರತದ ಪರ ಆಕರ್ಷಕ ಅರ್ಧಶತಕ (87) ಸಿಡಿಸಿದ ನಾಯಕ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.