Saturday, 14th December 2024

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌: ಇಂಗ್ಲೆಂಡಿಗೆ ಮೂರು ಸ್ಥಾನಗಳ ಜಿಗಿತ

ಮ್ಯಾಂಚೆಸ್ಟರ್‌: ಸರಣಿಯ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಐದು ವಿಕೆಟ್‌ಗಳಿಂದ ಶ್ರೀಲಂಕಾವನ್ನು ಸೋಲಿಸುವ ಮೂಲಕ ಡಬ್ಲ್ಯೂಟಿಎಸ್ ಅಂಕಪಟ್ಟಿಯಲ್ಲಿಯೂ ಜಂಪ್‌ ಮಾಡಿದೆ. ಸೋಲಿನೊಂದಿಗೆ ವರ್ಷವನ್ನು ಆರಂಭಿಸಿದ ನಂತರ ಇದು ಸತತ ನಾಲ್ಕನೇ ಜಯವಾಗಿದೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೂರನೇ ಸೀಸನ್‌ ಅಂಕಪಟ್ಟಿಯಲ್ಲಿ ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಲಾಭವನ್ನು ಇಂಗ್ಲೆಂಡ್ ಪಡೆದುಕೊಂಡಿದೆ. ಇಂಗ್ಲೆಂಡ್ ತಂಡ ಮೂರು ಸ್ಥಾನಗಳ ಜಿಗಿತದ ಮೂಲಕ ಅಗ್ರ ಐದರೊಳಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಗೆಲುವಿನ ನಂತರ, ಇಂಗ್ಲೆಂಡ್ ತಂಡವು ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕ ಪಟ್ಟಿಯಲ್ಲಿ 41.07 ಶೇಕಡಾ ಗೆಲುವಿ ನೊಂದಿಗೆ ನಾಲ್ಕನೇ ಸ್ಥಾನ ತಲುಪಿದೆ. ಈ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ 13 ಪಂದ್ಯಗಳಲ್ಲಿ 6 ಗೆಲುವು, 6 ಸೋಲು ಹಾಗೂ ಒಂದು ಡ್ರಾದೊಂದಿಗೆ ಏಳನೇ ಸ್ಥಾನದಲ್ಲಿತ್ತು. ಆಂಗ್ಲರ ಗೆಲುವಿನ ಶೇಕಡಾವಾರು 36.54 ಆಗಿತ್ತು.

ಶ್ರೀಲಂಕಾ ತಂಡ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಸೋಲನ್ನು ಅನುಭವಿಸಿದ ಹಿನ್ನಲೆ 5 ಪಂದ್ಯಗಳಲ್ಲಿ 2 ಗೆಲುವು ಮತ್ತು 3 ಸೋಲುಗಳೊಂದಿಗೆ ನಾಲ್ಕನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಕುಸಿದಿದೆ. ಮ್ಯಾಂಚೆಸ್ಟರ್ ಸೋಲಿನ ನಂತರ, ಅವರ ಗೆಲುವಿನ ಶೇಕಡಾವಾರು 50 ರಿಂದ 40ಕ್ಕೆ ಕುಸಿದಿದೆ. ಅದೇ ಹೊತ್ತಿಗೆ ದಕ್ಷಿಣ ಆಫ್ರಿಕಾ ತಂಡ ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ.

ಎರಡು ಬಾರಿ ರನ್ನರ್ ಅಪ್ ಆಗಿರುವ ಟೀಮ್ ಇಂಡಿಯಾ 9 ಪಂದ್ಯಗಳಲ್ಲಿ 6 ಗೆಲುವು, 2 ಸೋಲು ಮತ್ತು ಒಂದು ಡ್ರಾದೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತ ತಂಡದ ಗೆಲುವಿನ ಶೇಕಡಾವಾರು 68.52 ಆಗಿದೆ. ಪ್ರಸ್ತುತ ಚಾಂಪಿಯನ್ ಆಸ್ಟ್ರೇಲಿಯಾ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು ಮತ್ತು ಒಂದು ಡ್ರಾದೊಂದಿಗೆ ಎರಡನೇ ಸ್ಥಾನದಲ್ಲಿದೆ. ಅವರ ಗೆಲುವಿನ ಶೇಕಡಾವಾರು 62.50 ಆಗಿದೆ. ನ್ಯೂಜಿಲೆಂಡ್ ತಂಡ 6 ಪಂದ್ಯಗಳಲ್ಲಿ 3 ಗೆಲುವು ಮತ್ತು 3 ಸೋಲುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಅವರ ಗೆಲುವಿನ ಶೇಕಡಾವಾರು 50 ಆಗಿದೆ.

WTC Points Table 2025:

1) ಭಾರತ
2) ಆಸ್ಟ್ರೇಲಿಯಾ
3) ನ್ಯೂಜಿಲ್ಯಾಂಡ್
4)‌ ಇಂಗ್ಲೆಂಡ್
5)‌ ಶ್ರೀಲಂಕಾ
6) ದಕ್ಷಿಣ ಆಫ್ರಿಕಾ
7) ಪಾಕಿಸ್ತಾನ
8) ಬಾಂಗ್ಲಾದೇಶ
9) ವೆಸ್ಟ್‌ ಇಂಡೀಸ್‌