ಕರಾಚಿ: ಭಾರತದ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಅವರು ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್(Shoaib Malik) ಅವರಿಂದ ವಿಚ್ಛೇದನ ಪಡೆದ ಬಳಿಕ ಸಾನಿಯ ಮರು ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇದೆ. ವಿಚ್ಛೇದನದ ಬಳಿಕ ಮಲಿಕ್ ಅವರು ಸನಾ ಜಾವೇದ್ ಅವರನ್ನು ಮದುವೆಯಾಗಿದ್ದರು. ಇದೀಗ ಸಾನಿಯಾ ಅವರು ಸನಾ ಜಾವೇದ್ ಅವರ ಮಾಜಿ ಪತಿ, ಪಾಕ್ ಗಾಯಕ ಉಮೈರ್ ಜಸ್ವಾಲ್ ಜತೆ ಗುಟ್ಟಾಗಿ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೊಂದು ಎಲ್ಲಡೆ ವೈರಲ್ ಆಗುತ್ತಿದೆ.
ಹೊಸ ವದಂತಿಗಳ ಪ್ರಕಾರ ಸಾನಿಯಾ ಅವರು ಉಮೈರ್ ಜಸ್ವಾಲ್ ಅವರನ್ನು ಗುಟ್ಟಾಗಿ ವಿವಾಹವಾಗಲಿದ್ದಾರೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಸಾನಿಯಾ ಅವರು ಜಸ್ವಾಲ್ ಜತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿಕೊಳ್ಳಲು ಕಾರಣ ಜಸ್ವಾಲ್ ಮಾಡಿರುವ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್. ಜಸ್ವಾಲ್ ಅವರು ಸನಾ ಜಾವೇದ್‌ನಿಂದ ವಿಚ್ಛೇದನದ ನಂತರ ತಮ್ಮ ಮರುಮದುವೆಯನ್ನು ಪ್ರಕಟಿಸುವ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಆದರೆ ತಾವು ಮದುವೆಯಾಗಲಿರುವ ವಧು ಯಾರೆಂದು ತಿಳಿಸಿರಲಿಲ್ಲ. ಹೀಗಾಗಿ ನೆಟ್ಟಿಗರು ಇದು ಸಾನಿಯಾ ಎಂದು ಕಲ್ಪನೆ ಮಾಡಿ ಸುಳ್ಳು ಸುದ್ದಿ(Fact Check) ಹರಿಡಿದ್ದಾರೆ. ಅಸಲಿಗೆ ಸಾನಿಯಾ ಯಾವುದೇ ಮರು ಮದುವೆಯಾಗುತ್ತಿಲ್ಲ.
ಎಚ್ಚರಿಕೆ ನೀಡಿದ್ದ ಸಾನಿಯಾ
ಸಾನಿಯಾ ಅವರು ತಮ್ಮ ಮರು ಮದುವೆಯ ಬಗ್ಗೆ ಸುಳ್ಳು ಸುದ್ದಿ ಹಬ್ಬುವರಿಗೆ ಈಗಾಗಲೇ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಯೂಟ್ಯೂಬರ್ ಶುಭಂಕರ್ ಮಿಶ್ರಾ ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ್ದ ಸಾನಿಯಾ ತಮ್ಮ ಮರು ಮದುವೆಯ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದರು. ಜತೆಗೆ ನೆಟ್ಟಿಗರಿಗೆ ಎಚ್ಚರಿಯನ್ನು ಕೂಡ ನೀಡಿದ್ದರು. ʼಸಾಮಾಜಿಕ ಜಾಲತಾಣದಲ್ಲಿ ನನ್ನ ಮದುವೆಯ ವಿಚಾರವಾಗಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾಗಿದೆ. ಇಂತಹ ಮೀಮ್ಸ್ಗಳು ಕೆಲವರಿಗೆ ಮನರಂಜನೆ ನೀಡಬಹುದು. ಆದರೆ, ಅದರಿಂದ ಉಂಟಾಗುವ ಕೆಟ್ಟ ಪರಿಣಾಮವನ್ನು ಒಮ್ಮೆ ಯೋಚಿಸಿದರೆ ಉತ್ತಮ. ಸಾಮಾಜಿಕ ಜಾಲತಾಣ ಇರುವುದು ಒಳ್ಳೆಯ ಉದ್ದೇಶಗಳನ್ನು ತಿಳಿಸುವ ಸಲುವಾಗಿ. ಯಾರೇ ಆದರೂ ಜಾಲತಾಣದಲ್ಲಿ ಪೋಸ್ಟ್ ಮಾಡುವಾಗ ಅದಕ್ಕೆ ಜವಾಬ್ದಾರರಾಗಿರಬೇಕು. ಇಂತಹ ಆಧಾರರಹಿತ ಸುದ್ದಿಗಳನ್ನು ಹರಡುವುದನ್ನು ಮೊದಲು ನಿಲ್ಲಿಸಿ” ಎಂದು ಹೇಳಿದ್ದರು.
ಇದನ್ನೂ ಓದಿ IND vs BAN : ಭಾರತಕ್ಕೆ86 ರನ್‌ಗಳ ಭರ್ಜರಿ ಜಯ; ಟಿ20 ಸರಣಿ ಕೈವಶ
ಶೋಯೆಬ್ ಮಲಿಕ್ ಸನಾ ಜಾವೇದ್ ಅವರನ್ನು ವಿವಾಹವಾಗುವ ಮೂಲಕ ಸಾನಿಯಾ ಮಿರ್ಜಾ(Sania Mirza) ಜತೆಗಿನ 13 ವರ್ಷದ ದಾಂಪತ್ಯವು ಕೊನೆಗೊಂಡಿತ್ತು. ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್ ಎಂಬ ಪುತ್ರನಿದ್ದಾನೆ. ಮಲಿಕ್ಗೆ ವಿಚ್ಚೇದನ ನೀಡಿದ ಬಳಿಕ ಸಾನಿಯಾ ದುಬೈನಲ್ಲಿ ನೆಲೆಸಿದ್ದಾರೆ.