ನವದೆಹಲಿ: ಆಟಗಾರರ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಕೇಂದ್ರ ಗುತ್ತಿಗೆ ಪಡೆದಿರುವ ಆಟಗಾರ ಫಖರ್ ಜಮಾನ್ (Fakhar Zaman) ಅವರಿಗೆ ಶೋಕಾಸ್ ನೋಟಿಸ್ ನೀಡಿದೆ. ಇಂಗ್ಲೆಂಡ್ ವಿರುದ್ಧದ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಗಳಿಗೆ ಮಾಜಿ ನಾಯಕ ಬಾಬರ್ ಅಜಮ್ ಅವರನ್ನು ಹೊರಗಿಡುವ ನಿರ್ಧಾರವನ್ನು ಫಖರ್ ಭಾನುವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪ್ರಶ್ನಿಸಿದ್ದರು. ಮಂಡಳಿಯ ನೀತಿಗಳು ಮತ್ತು ಆಯ್ಕೆ ಟೀಕಿಸುವ ಮೂಲಕ ಫಖರ್ ತಮ್ಮ ಒಪ್ಪಂದ ಉಲ್ಲಂಘಿಸಿದ್ದಾರೆ ಎಂದು ಪಿಸಿಬಿ ನೋಟಿಸ್‌ನಲ್ಲಿ ತಿಳಿಸಿದ ನಂತರ ಅಕ್ಟೋಬರ್ 21 ರೊಳಗೆ ಶೋಕಾಸ್ ನೋಟಿಸ್‌ಗೆ ಉತ್ತರ ಸಲ್ಲಿಸುವಂತೆ ಸೂಚಿಸಿದೆ.
It’s concerning to hear suggestions about dropping Babar Azam. India didn’t bench Virat Kohli during his rough stretch between 2020 and 2023, when he averaged 19.33, 28.21, and 26.50, respectively. If we are considering sidelining our premier batsman, arguably the best Pakistan…
— Fakhar Zaman (@FakharZamanLive) October 13, 2024
ಬಾಬರ್ ಅಜಮ್ ಅವರನ್ನು ಕೈಬಿಡುವ ಬಗ್ಗೆ ಸಲಹೆಗಳನ್ನು ಕೇಳುವುದು ಕಳವಳಕಾರಿಯಾಗಿದೆ. 2020 ಮತ್ತು 2023 ರ ನಡುವೆ ವಿರಾಟ್ ಕೊಹ್ಲಿ ಕ್ರಮವಾಗಿ 19.33, 28.21 ಮತ್ತು 26.50 ಸರಾಸರಿಯನ್ನು ಹೊಂದಿದ್ದರು. ಆದಾಗ್ಯೂ ಅವರನ್ನು ತಂಡದಲ್ಲಿ ಮುಂದುವರಿಸಲಾಗಿತ್ತು ಎಂದು ಫಖರ್ ಹೇಳಿದ್ದರು.
“ಪಾಕಿಸ್ತಾನವು ಇದುವರೆಗೆ ಕಂಡಿರುವ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿರುವ ನಮ್ಮ ಪ್ರಮುಖ ಬ್ಯಾಟರ್ ಅನ್ನು ತಂಡದಿಂದ ಹೊರಗಿಡಲು ಯೋಚಿಸುತ್ತಿದ್ದರೆ, ಅದು ನಕಾರಾತ್ಮಕ ಸಂದೇಶವನ್ನು ರವಾನಿಸಲಿದೆ. ಪ್ಯಾನಿಕ್ ಬಟನ್ ಒತ್ತುವುದನ್ನು ತಪ್ಪಿಸಲು ಇನ್ನೂ ಸಮಯವಿದೆ. ನಾವು ನಮ್ಮ ಪ್ರಮುಖ ಆಟಗಾರರನ್ನು ದುರ್ಬಲಗೊಳಿಸುವ ಬದಲು ಅವರನ್ನು ರಕ್ಷಿಸುವತ್ತ ಗಮನ ಹರಿಸಬೇಕು ” ಫಖರ್ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 556 ರನ್ ಗಳಿಸಿದರೂ ಮೊದಲ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತಿತ್ತು. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಇಂಗ್ಲೆಂಡ್ ವಿರುದ್ಧದ ಉಳಿದ ಎರಡು ಟೆಸ್ಟ್ ಪಂದ್ಯಗಳಿಗೆ ಸ್ಟಾರ್ ಆಟಗಾರರಾದ ಬಾಬರ್ ಅಜಮ್, ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಮತ್ತು ಸ್ಟಾರ್ ವೇಗಿಗಳಾದ ಶಾಹೀನ್ ಶಾ ಅಫ್ರಿದಿ ಮತ್ತು ನಸೀಮ್ ಶಾ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ಕೈಗೊಂಡಿದೆ. ಸರಣಿಯ ಆರಂಭಿಕ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 47 ರನ್‌ಗಳಿಂದ ಸೋಲು ಅನುಭವಿಸಿದ ನಂತರ ಪಾಕಿಸ್ತಾನವು ಕಾಯಂ ಆಟಗಾರರ ಕರೆತರುವ ನಿರ್ಧಾರವನ್ನು ಘೋಷಿಸಿತ್ತು.
ಪಾಕಿಸ್ತಾನದ ಕ್ರಿಕೆಟ್‌ನ ಹಿತದೃಷ್ಟಿಯಿಂದ ಆಟಗಾರರನ್ನು ತಂಡದಿಂದ ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಿಸಿಬಿ ಹೇಳಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಪಿಸಿಬಿ ವಕ್ತಾರರು ಮಂಡಳಿಯ ನಿರ್ಧಾರವನ್ನು ಬೆಂಬಲಿಸಿ ಆಟಗಾರರಿಗೆ ವಿಶ್ರಾಂತಿ ನೀಡಿದ್ದೇವೆ ಎಂದಿದೆ.
ಪುರುಷರ ಆಯ್ಕೆ ಸಮಿತಿಯನ್ನು ಪುನರ್ ರಚಿಸುವ ನಿರ್ಧಾರವನ್ನು ಪಿಸಿಬಿ ಘೋಷಿಸಿದ ನಂತರ ಈ ನಿರ್ಧಾರ ಬಂದಿದೆ. ಅಲೀಮ್ ದಾರ್, ಆಕಿಬ್ ಜಾವೇದ್, ಅಜರ್ ಅಲಿ ಮತ್ತು ಹಸನ್ ಚೀಮಾ ಅವರನ್ನು ಆಯ್ಕೆ ಸಮಿತಿಯ ಹೊಸ ಸದಸ್ಯರನ್ನಾಗಿ ನೇಮಿಸಲಾಗಿದೆ.