ನವದೆಹಲಿ: ಭಾರತ ಹಾಕಿ ತಂಡದ ಯಶಸ್ವಿ ನಾಯಕ ಹರ್ಮನ್‌ಪ್ರೀತ್ ಸಿಂಗ್(Harmanpreet Singh) ಅವರು ಮೂರನೇ ಬಾರಿಗೆ ಎಫ್ಐಎಚ್ ವರ್ಷದ(FIH Awards) ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮುನ್ನ 2020-22ರ ಅವಧಿಯಲ್ಲಿ ಅವರು ಈ ಪ್ರಶಸ್ತಿ ಗೆದ್ದಿದ್ದರು. ಮಾಜಿ ಆಟಗಾರ ಪಿ. ಆರ್ ಶ್ರೀಜೇಶ್(PR Sreejesh) ವರ್ಷದ ಗೋಲ್ ಕೀಪರ್ ಪ್ರಶಸ್ತಿ ಪಡೆದರು.
ತಜ್ಞರ ಸಮಿತಿ, ರಾಷ್ಟ್ರೀಯ ಫೆಡರೇಷನ್‌ಗಳ ಮತಗಳ ನಂತರ ಪ್ರಶಸ್ತಿ ಪ್ರಕಟಿಸಲಾಯಿತು. ರಾಷ್ಟ್ರೀಯ ಫೆಡರೇಷನ್‌ಗಳನ್ನು ಆಯಾ ರಾಷ್ಟ್ರೀಯ ತಂಡಗಳ ನಾಯಕರು, ತರಬೇತುದಾರರು ಮತ್ತು ಮಾಧ್ಯಮದವರು ಪ್ರತಿನಿಧಿಸಿದ್ದರು.
ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಜಯಿಸಿತ್ತು. ಮೊನ್ನೆಯಷ್ಟೇ ಏಷ್ಯನ್ ಹಾಕಿ ಚಾಂಪಿಯನ್ಸ್ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿತ್ತು. ಸತತ ಎರಡು ಒಲಿಂಪಿಕ್ಸ್‌ನಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಕೂಡ ಪ್ರಮುಖ ಪಾತ್ರವಹಿಸಿದ್ದರು. ತಡೆಗೋಡೆಯಂತೆ ನಿಂತು ಎದುರಾಳಿ ತಂಡದ ಗೋಲ್‌ಗಳನ್ನು ತಡೆದು ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಹಾಕಿಗೆ ವಿದಾಯ ಹೇಳಿದ್ದರು. ಪ್ರಸ್ತುತ ಅವರು ಭಾರತ ಜೂನಿಯರ್ ಹಾಕಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ PR Sreejesh: ಮಾಜಿ ಗೋಲ್‌ಕೀಪರ್ ಶ್ರೀಜೇಶ್‌ಗೆ ಹೃದಯಸ್ಪರ್ಶಿ ಪತ್ರ ಕಳುಹಿಸಿದ ಮೋದಿ
‘ಒಂದು ಉತ್ತಮ ತಂಡ ಹೊಂದಿದ್ದಾಗ, ಅದು ನಮ್ಮನ್ನು ಉತ್ತಮ ಆಟಗಾರನಾಗಿ ರೂಪಿಸುತ್ತದೆ. ನಮ್ಮ ಕೆಲಸ ಸುಲಭವಾಗುತ್ತದೆ. ಈ ಹಂತಕ್ಕೆ ತಲುಪಲು ನೆರವಾದ ತಂಡ ಮತ್ತು ಹಾಕಿ ಇಂಡಿಯಾಗೂ ಅಭಾರಿ. ಪತ್ನಿ ಮತ್ತು ಮಗಳ ಮುಂದೆ ಈ ಪ್ರಶಸ್ತಿಯನ್ನು ಗೆದ್ದಿರುವುದು ವಿಶೇಷ ಭಾವನೆʼ ಎಂದು ಹರ್ಮನ್‌ಪ್ರೀತ್ ತಿಳಿಸಿದರು.
ʼನಾನು ಇಂದು ತುಂಬಾ ಸಂತೋಷವಾಗಿದ್ದೇನೆ. ನನ್ನ ಆಟದ ವೃತ್ತಿಜೀವನದ ಈ ಕೊನೆಯ ಆಟದ ಗೌರವಕ್ಕಾಗಿ ಧನ್ಯವಾದಗಳು. ಭಾರತ ತಂಡದ ಪರ ಆಡುವಾಗ ನೀಡಿದ ಎಲ್ಲಾ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಹಾಕಿ ಇಂಡಿಯಾಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಪ್ರಶಸ್ತಿ ಸಂಪೂರ್ಣವಾಗಿ ನನ್ನ ತಂಡಕ್ಕೆ ಸೇರಿದ್ದುʼ ಎಂದು ಶ್ರೀಜೇಶ್ ಹೇಳಿದರು.
36 ವಷದ ಕೇರಳದ ಶ್ರೀಜೇಶ್ ಭಾರತ ಪರ 336 ಪಂದ್ಯಗಳನ್ನು ಆಡಿದ್ದಾರೆ. 2 ಒಲಿಂಪಿಕ್ಸ್ ಕಂಚಿನ ಪದಕ, ಏಷ್ಯನ್ ಗೇಮ್ಸ್‌ನಲ್ಲಿ 2 ಚಿನ್ನ, 1 ಕಂಚು, ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 2 ಬೆಳ್ಳಿ, ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ 2 ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.