Friday, 22nd November 2024

ವಿಶ್ವಕಪ್‌ ಫೈನಲ್‌: ಗಗನಕ್ಕೇರಿದ ಹೊಟೇಲ್ ರೂಂ ಬೆಲೆ, ವಿಮಾನ ಟಿಕೆಟ್​ಗಳ ದರ…!

ಅಹಮದಾಬಾದ್: ನವೆಂಬರ್ 19ರಂದು ಅಹಮದಾಬಾದ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹೈ ವೋಲ್ಟೇಜ್‌ ಪಂದ್ಯಕ್ಕಾಗಿ ಕ್ರಿಕೆಟ್‌ಪ್ರೇಮಿಗಳು ಅಹಮದಾಬಾದ್‌ಗೆ ಆಗಮಿಸುತ್ತಿದ್ದಾರೆ. ಆದರೆ, ಇಲ್ಲಿನ ಹೋಟೆಲ್ ಕೊಠಡಿಗಳ ಬೆಲೆ ಗಗನಕ್ಕೇರಿದೆ. ವಿಮಾನ ಟಿಕೆಟ್‌ಗಳ ದರವೂ ವಿಪರೀತ ಏರಿಕೆಯಾಗಿದೆ.

ಸಾಮಾನ್ಯವಾಗಿ ಅಹಮದಾಬಾದ್‌ನಲ್ಲಿ ಐಷಾರಾಮಿ ಹೋಟೆಲ್ ರೂಂ ಬೆಲೆ (ಒಂದು ರಾತ್ರಿಗೆ) ಸುಮಾರು 10 ಸಾವಿರ ರೂಪಾಯಿ ಇರುತ್ತದೆ. ಒಂದು ಕೊಠಡಿ ಬಾಡಿಗೆಗೆ ಪಡೆಯಲು ರಾತ್ರಿಗೆ ರೂ.1 ಲಕ್ಷ ರೂ.ವರೆಗೂ ಪಾವತಿಸಬೇಕಿದೆ. ಇತರೆ ಐಷಾರಾಮಿ ಹೋಟೆಲ್‌ ಮಾಲೀಕರು 24 ಸಾವಿರದಿಂದ 2 ಲಕ್ಷದ 15 ಸಾವಿರ ರೂ.ವರೆಗೂ ವಸೂಲಿ ಮಾಡುತ್ತಿದ್ದಾರೆ ಎಂದು ಹಲವು ವರದಿಗಳಲ್ಲಿ ಬಹಿರಂಗಪಡಿಸಿವೆ. ಅಕ್ಟೋಬರ್ 15ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆಯೂ ಸಹ ಅಹಮದಾಬಾದ್‌ನಲ್ಲಿ ಹೋಟೆಲ್ ಬೆಲೆಗಳು ಭಾರಿ ಏರಿಕೆ ಕಂಡಿದ್ದವು.

ಭಾರತ-ಆಸ್ಟ್ರೇಲಿಯಾ ಫೈನಲ್‌ ಪಂದ್ಯದ ಹಿನ್ನೆಲೆಯಲ್ಲಿ ಹೋಟೆಲ್‌ಗಳೊಂದಿಗೆ ವಿಮಾನ ಟಿಕೆಟ್ ದರವೂ ಸಾಮಾನ್ಯ ಪ್ರಯಾಣಿಕರನ್ನು ಚಿಂತೆಗೀಡು ಮಾಡಿದೆ. ಕೆಲವು ವಿಮಾನಯಾನ ಸಂಸ್ಥೆಗಳಲ್ಲಿ ಟಿಕೆಟ್ ದರಗಳು ಸುಮಾರು ಶೇ 200 ರಿಂದ 300 ದಷ್ಟು ಹೆಚ್ಚಾದಂತೆ ತೋರುತ್ತಿದೆ. ಫೈನಲ್‌ ಪಂದ್ಯಕ್ಕಾಗಿ ನ.13ರಂದು ಅಂತಿಮ ಸುತ್ತಿನ ಟಿಕೆಟ್‌ಗಳು ಹಾಟ್​ ಕೇಕ್‌ನಂತೆ ಮಾರಾಟವಾಗಿದ್ದವು.

ಕೋಲ್ಕತ್ತಾದ ಈಡನ್​ ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ 2ನೇ ಸೆಮಿ ಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡದೆದುರು ದಕ್ಷಿಣ ಆಫ್ರಿಕಾ ಅಂತಿಮವಾಗಿ ನಿರಾಸೆ ಅನುಭವಿಸಿತು. ನಾಕೌಟ್ ಪಂದ್ಯದಲ್ಲಿ ಸೋಲುಂಡು ‘ಚೋಕರ್ಸ್‌’ ಹಣೆಪಟ್ಟಿಯನ್ನು ಮತ್ತಷ್ಟು ಕಾಲ ಹಾಗೆಯೇ ಉಳಿಸಿಕೊಂಡಿತು.