Friday, 22nd November 2024

ಇಂದಿನಿಂದ ಮೊದಲ ದಕ್ಷಿಣ ಆಫ್ರಿಕಾ-ಭಾರತ ಟಿ20 ಆರಂಭ

ನವದೆಹಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಗುರುವಾರ ನಡೆ ಯಲಿರುವ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸತತ 13 ಗೆಲುವಿನ ವಿಶ್ವದಾಖಲೆ ನಿರ್ಮಿಸುವತ್ತ ಕಣ್ಣಿಟ್ಟಿದೆ.

ನಾಯಕ ಕೆಎಲ್ ರಾಹುಲ್ ಗಾಯದಿಂದಾಗಿ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಇದರಿಂದ ನಾಯಕತ್ವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಹೆಗಲೇರಿದ್ದರೆ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಉಪನಾಯಕರಾಗಿ ಬಡ್ತಿ ಪಡೆದಿದ್ದಾರೆ.

ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿರುವ ಜತೆಗೆ ಕನ್ನಡಿಗ ಕೆಎಲ್ ರಾಹುಲ್ ಅಲಭ್ಯತೆ ಭಾರತಕ್ಕೆ ಹೊಡೆತ ನೀಡಿದೆ. ಪಂತ್ ಯುವ-ಅನುಭವಿ ತಂಡವನ್ನು ಮುನ್ನಡೆಸಲಿದ್ದು, ರಾಹುಲ್ ದ್ರಾವಿಡ್ ಮಾರ್ಗದರ್ಶನ ದಲ್ಲಿ ಗೆಲುವಿನ ಲಯ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.

ರಾಹುಲ್ ಹೊರಬಿದ್ದ ಹಿನ್ನೆಲೆಯಲ್ಲಿ ಋತುರಾಜ್-ಇಶಾನ್ ಕಿಶನ್ ಇಬ್ಬರಿಗೂ ಇನಿಂಗ್ಸ್ ಆರಂಭಿಸುವ ಅವಕಾಶ ಲಭಿಸಿದೆ. ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ 4ನೇ ಕ್ರಮಾಂಕ ದಲ್ಲಿ ಆಡಿದ್ದರೂ, ಟೀಮ್ ಇಂಡಿಯಾದಲ್ಲಿ ಫಿನಿಷರ್ ಪಾತ್ರವನ್ನೇ ನಿರ್ವಹಿಸ ಬೇಕಾಗಿದೆ. ಅವರಿಗೆ ದಿನೇಶ್ ಕಾರ್ತಿಕ್ ಕಂಪನಿ ನೀಡಬಹುದು.

ಬೌಲಿಂಗ್ ವಿಭಾಗಕ್ಕೆ ಭುವನೇಶ್ವರ್ ಸಾರಥ್ಯ ವಹಿಸಲಿದ್ದು, ಹರ್ಷಲ್ ಪಟೇಲ್ 2ನೇ ವೇಗಿ ಆಗಬಹುದು. 3ನೇ ವೇಗಿ ಸ್ಥಾನಕ್ಕೆ ಆವೇಶ್ ಖಾನ್ ಮತ್ತು ಯಾರ್ಕರ್ ಸ್ಪೆಷಲಿಸ್ಟ್ ಅರ್ಷದೀಪ್ ನಡುವೆ ಸ್ಪರ್ಧೆ ಇದೆ. ಉಮ್ರಾನ್ ಮಲಿಕ್ ಮೊದಲ ಪಂದ್ಯಕ್ಕೆ 11ರ ಬಳಗದ ರೇಸ್‌ನಲ್ಲಿಲ್ಲ. ಸ್ಪಿನ್ನರ್‌ಗಳಲ್ಲಿ ಚಾಹಲ್‌ಗೆ ಸ್ಥಾನ ಖಚಿತವಿದ್ದರೆ, 2ನೇ ಸ್ಪಿನ್ನರ್ ಸ್ಥಾನಕ್ಕೆ ಅಕ್ಷರ್-ರವಿ ಬಿಷ್ಣೋಯಿ ನಡುವೆ ಪೈಪೋಟಿ ಇದೆ.
ಸಂಭಾವ್ಯ ತಂಡ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ವಿ.ಕೀ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್/ದೀಪಕ್ ಹೂಡಾ, ಅಕ್ಷರ್ ಪಟೇಲ್/ರವಿ ಬಿಷ್ಣೋಯಿ, ಭುವನೇಶ್ವರ್, ಹರ್ಷಲ್ ಪಟೇಲ್, ಆವೇಶ್ ಖಾನ್/ಅರ್ಷದೀಪ್ ಸಿಂಗ್, ಯಜುವೇಂದ್ರ ಚಾಹಲ್.

ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವಿಭಾಗದ ಅಗ್ರ 5 ಕ್ರಮಾಂಕ ನಿಶ್ಚಿತವಾಗಿದ್ದು, 6ನೇ ಕ್ರಮಾಂಕಕ್ಕೆ ಹೆನ್ರಿಕ್ ಕ್ಲಾಸೆನ್ ಮತ್ತು ರೀಜಾ ಹೆಂಡ್ರಿಕ್ಸ್ ನಡುವೆ ಪೈಪೋಟಿ ಇದೆ. ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸಲು ಬಯಸಿದರೆ ಕೇಶವ್ ಮಹಾರಾಜ್ ಕೂಡ ಕಣಕ್ಕಿಳಿಯ ಬಹುದು. ರಬಾಡ-ನೋಕಿಯ ಜತೆಗೆ ಮಾರ್ಕೋ ಜಾನ್ಸೆನ್ 3ನೇ ವೇಗಿ ಆಗಬಹುದು.

ಸಂಭಾವ್ಯ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿಕಾಕ್ (ವಿ.ಕೀ), ರಸೀ ವಾನ್ ಡರ್ ಡುಸೆನ್, ಏಡನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ರೀಜಾ ಹೆಂಡ್ರಿಕ್ಸ್/ಹೆನ್ರಿಕ್ ಕ್ಲಾಸೆನ್, ಮಾರ್ಕೋ ಜಾನ್ಸೆನ್, ಡ್ವೇನ್ ಪ್ರಿಟೋರಿಯಸ್/ಕೇಶವ್ ಮಹಾರಾಜ್, ಕಗಿಸೊ ರಬಾಡ, ಅನ್ರಿಚ್ ನೋಕಿಯ, ತಬರೇಜ್ ಶಮ್ಸಿ.

ಪಂದ್ಯ ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್