Sunday, 15th December 2024

ಅಂಡರ್‌ 19: ಇಂದು ಮೊದಲ ಸೆಮಿಫೈನಲ್‌

ಬೆನೋನಿ: ಪ್ರಭಾರತ, ಮಂಗಳವಾರ ನಡೆಯುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್ ಆಗಿರುವ ಭಾರತ ಈ ಬಾರಿ ಸತತ ಐದು ಗೆಲುವುಗಳೊಂದಿಗೆ ಅಮೋಘ ಫಾರ್ಮಿನಲ್ಲಿದೆ.

ಪ್ರತಿಭಾನ್ವಿತ ಯುವ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿರುವುದು ತಂಡದ ಸುಲಭ ಗೆಲುವುಗಳಿಗೆ ಕಾರಣವಾಗಿದೆ. ಬ್ಯಾಟರ್‌ಗಳು ರನ್ನಿನ ಹೊಳೆ ಹರಿಸಿದರೆ, ಬೌಲರ್‌ಗಳು ಪರಿಣಾಮಕಾರಿಯಾಗಿದ್ದಾರೆ.

18 ವರ್ಷದ ಮುಶೀರ್ ಖಾನ್ ಅವರು ಎರಡು ಶತಕ, ಒಂದು ಅರ್ಧ ಶತಕದೊಡನೆ ಈ ಟೂರ್ನಿಯಲ್ಲಿ 83.50 ಸರಾಸರಿಯಲ್ಲಿ 334 ರನ್ ಪೇರಿಸಿ ಟೂರ್ನಿಯ ಅಗ್ರ ಬ್ಯಾಟರ್ ಎನಿಸಿದ್ದಾರೆ. ನಾಯಕ ಉದಯ್ ಸಹಾರನ್ ಅವರು 304 ರನ್ (61.60 ಸರಾಸರಿ) ಕಲೆ ಹಾಕಿದ್ದಾರೆ. ಸೂಪರ್‌ ಸಿಕ್ಸ್ ಪಂದ್ಯ ದಲ್ಲಿ ಮತ್ತೊಬ್ಬ ಬ್ಯಾಟರ್‌ ಸಚಿನ್ ದಾಸ್ ಶತಕ ಬಾರಿಸಿದ್ದರು.

ಬೌಲಿಂಗ್‌ನಲ್ಲಿ ತಂಡದ ಉಪನಾಯಕ ಸೌಮಿ ಕುಮಾರ್ ಪಾಂಡೆ ಎಡಗೈ ಸ್ಪಿನ್ ದಾಳಿಯಲ್ಲಿ ಮೂರು ಬಾರಿ ನಾಲ್ಕು ವಿಕೆಟ್‌ ಗೊಂಚಲು ಸಹಿತ 16 ವಿಕೆಟ್‌ಗಳನ್ನು ಬಾಚಿಕೊಂಡಿದ್ದಾರೆ. ಟೂರ್ನಿಯ ಯಶಸ್ವಿ ಬೌಲರ್‌ಗಳಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವೇಗದ ಬೌಲರ್‌ಗಳಾದ ನಮನ್ ತಿವಾರಿ (9 ವಿಕೆಟ್‌) ಮತ್ತು ರಾಜ್ ಲಿಂಬಾನಿ (4 ವಿಕೆಟ್‌) ಅವರು ಯಶಸ್ಸು ದೊರಕಿಸಿಕೊಟ್ಟ ನಂತರ ಪಾಂಡೆ ಎದುರಾಳಿಗಳ ಬೆನ್ನೆಲುಬು ಮುರಿಯುತ್ತ ಬಂದಿ ದ್ದಾರೆ.‌

ಪಾಕಿಸ್ತಾನ ತಂಡ, ಫೆ 8ರಂದು ನಡೆಯುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.