ಲಂಡನ್: ಖ್ಯಾತ ಫುಟ್ಬಾಲ್ ಆಟಗಾರ ಡಿಯೆಗೊ ಮರಡೋನಾ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.
1986ರ ವಿಶ್ವಕಪ್ ಪಂದ್ಯದಲ್ಲಿ ಅವರು ಅರ್ಜೆಂಟೀನಾಗೆ ವಿಜಯ ಲಭಿಸುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅರ್ಜೆಂಟೀನಾ ಫುಟ್ಬಾಲ್ ತಂಡದ ಮಿಡ್ಫೀಲ್ಡರ್ ಹಾಗೂ ಮ್ಯಾನೇಜರ್ ಕೂಡ ಆಗಿದ್ದ ಮರಡೋನಾ, ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದೆನಿಸಿಕೊಂಡಿದ್ದರು. 1986ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಅವರು ಬಾರಿಸಿದ ಒಂದು ಗೋಲು ಪ್ರಶಸ್ತಿಯನ್ನು ಎತ್ತಿ ಹಿಡಿಯುವಂತೆ ಮಾಡಿತ್ತು. ಇವರನ್ನು ‘ಹ್ಯಾಂಡ್ ಆಫ್ ಗಾಡ್’ ಎಂದೇ ಟೀಂನಲ್ಲಿ ಕರೆಯಲಾಗುತ್ತಿತ್ತು.
ತಮ್ಮ ವೃತ್ತಿಜೀವನದಲ್ಲಿ 91 ಪಂದ್ಯಗಳನ್ನು ಆಡಿದ್ದು, 34 ಗೋಲುಗಳನ್ನು ಬಾರಿಸಿದ್ದಾರೆ. 1986ರ ವಿಶ್ವಕಪ್ ಸೇರಿದಂತೆ 4 ಫಿಫಾ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಆಡಿದ್ದರು. 1986ರ ವಿಶ್ವಕಪ್ನಲ್ಲಿ ಆರ್ಜೆಂಟೀನಾ ತಂಡದ ನಾಯಕರಾಗಿದ್ದರು. ಆ ಪಂದ್ಯಾವಳಿ ಯಲ್ಲಿ ಅತ್ಯುತ್ತಮ ಆಟಗಾರ ಎಂಬ ಪುರಸ್ಕಾರಕ್ಕೆ ಭಾಜನರಾಗಿದ್ದರು.
2005ರಲ್ಲಿ ಅವರು ತೂಕ ಇಳಿಸಲು ಪ್ರಯತ್ನಿಸಿದ್ದರು. 2007ರಲ್ಲಿ ಅತಿಯಾದ ಮದ್ಯಪಾನದಿಂದಾಗಿ ಆರೋಗ್ಯದಲ್ಲಿ ಏರಿಳಿತ ಕಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಫುಟ್ಬಾಲ್ ವಿಶ್ವಕಪ್ನಲ್ಲಿ ಅವರ ಆರೋಗ್ಯವೂ ಹದಗೆಟ್ಟಿತು.