ನವದೆಹಲಿ: ಭಾರತದ ಫುಟ್ಬಾಲ್ ತಂಡದ ದಿಗ್ಗಜ ಆಟಗಾರ ಸುನಿಲ್ ಛೆಟ್ರಿ ಅವರು ಅಂತಾರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಪ್ರಕಟಿಸಿದ್ದಾರೆ. ತಮ್ಮ ಕೊನೆಯ ಪಂದ್ಯವನ್ನು ಜೂನ್ 26 ರಂದು ಕುವೈತ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
2005ರಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದ ಛೆಟ್ರಿ ಅವರು 19 ವರ್ಷಗಳ ಸುದೀರ್ಘ ವೃತ್ತಿಜೀವನ ಕೊನೆಗೊಳಿಸಲು ಸಿದ್ಧರಾಗಿದ್ದಾರೆ.
ಛೆಟ್ರಿ ಅವರು ಜನಿಸಿದ್ದು 1984ರ ಆಗಸ್ಟ್ 3ರಂದು. ತಂದೆ ಕೆಬಿ ಛೆಟ್ರಿ, ತಾಯಿ ಸುಶೀಲಾ ಛೆಟ್ರಿ. ಸುನಿಲ್ ಛೆಟ್ರಿ ಅವರು ಕ್ರೀಡಾ ಹಿನ್ನೆಲೆಯುಳ್ಳ ಕುಟುಂಬಕ್ಕೆ ಸೇರಿದವರು. ಅವರ ತಂದೆ ಭಾರತೀಯ ಸೇನೆಯಲ್ಲಿ ಇಎಂಇ ಕಾರ್ಪ್ಸ್ ಅಧಿಕಾರಿಯಾಗಿದ್ದರು. ಸೇನೆಯ ಪರ ಫುಟ್ಬಾಲ್ ಕೂಡ ಆಡುತ್ತಿದ್ದರು. ತಾಯಿ ನೇಪಾಳ ರಾಷ್ಟ್ರೀಯ ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯಾಗಿದ್ದರು.
ಪೋಷಕರು ಫುಟ್ಬಾಲ್ ಹಿನ್ನೆಲೆಯವರಾದ ಕಾರಣ ಸುನಿಲ್ ಛೆಟ್ರಿ, ಚಿಕ್ಕ ವಯಸ್ಸಿನಲ್ಲೇ ಫುಟ್ಬಾಲ್ ಕಡೆ ಗಮನ ಹರಿಸುತ್ತಾರೆ. ದೇಶೀಯ ಫುಟ್ಬಾಲ್ನಲ್ಲಿ ಡೆಲ್ಲಿ ಸೇರಿ ಅನೇಕ ಕ್ಲಬ್ಗಳ ಪರ ಕಣಕ್ಕಿಳಿದಿರುವ ಛೆಟ್ರಿ, ಅತ್ಯಂತ ಯಶಸ್ವಿ ವೃತ್ತಿಪರ ವೃತ್ತಿಜೀವನ ಹೊಂದಿದ್ದಾರೆ.
2004ರಲ್ಲಿ ಭಾರತೀಯ ಅಂಡರ್-20 ತಂಡದ ಪರ ಚೊಚ್ಚಲ ಪಂದ್ಯ ಆಡಿದ್ದ ಸುನಿಲ್, 2005ರಲ್ಲಿ ಭಾರತೀಯ ಫುಟ್ಬಾಲ್ ತಂಡದ ಖಾಯಂ ಸದಸ್ಯರಾದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋಲು ಗಳಿಸಿದ ಸಕ್ರಿಯ ಆಟಗಾರರ ಪೈಕಿ 3ನೇ ಹಾಗೂ ಒಟ್ಟಾರೆ 4ನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಅಲಿ ದೇಯಿ, ಲಿಯೋನೆಲ್ ಮೆಸ್ಸಿ ನಂತರ ಸ್ಥಾನ ಪಡೆದಿದ್ದಾರೆ. ಛೆಟ್ರಿ ಒಟ್ಟು 150 ಪಂದ್ಯಗಳಲ್ಲಿ 94 ಗೋಲು ಗಳಿಸಿದ್ದಾರೆ.
ಸುನಿಲ್ ಛೆಟ್ರಿ ಅವರು 2017ರಲ್ಲಿ ಸೋನಮ್ ಭಟ್ಟಾಚಾರ್ಯ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತನ್ನ ಕೋಚ್ ಆಗಿದ್ದ ಮೋಹನ್ ಬಗಾನ್ ಮಗಳನ್ನೇ ಸುನಿಲ್ ಛೆಟ್ರಿ ಪ್ರೀತಿಸಿ ಮದುವೆಯಾದರು.
ಸುನಿಲ್ ಛೆಟ್ರಿಗೆ ವಿವಿಧ ಪ್ರಶಸ್ತಿಗಳು, ಪುರಸ್ಕಾರಗಳು ಲಭಿಸಿವೆ. ಭಾರತದ ಅಮೂಲ್ಯ ಕ್ರೀಡಾ ಪ್ರಶಸ್ತಿ ಅರ್ಜುನ ಪ್ರಶಸ್ತಿ ಪಡೆದಿದ್ದಾರೆ. 2019ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನೂ ಸ್ವೀಕರಿಸಿದ್ದಾರೆ.