Friday, 22nd November 2024

ಖೇಲ್ ಇಂಡಿಯಾ ಗೇಮ್ಸ್‌ಗೆ 4 ದೇಸಿ ಕ್ರೀಡೆಗಳ ಸೇರ್ಪಡೆ

ನವದೆಹಲಿ: ಮಲ್ಲಕಂಬ ಮತ್ತು ಕೇರಳ ಮೂಲದ ಯುದ್ಧಕಲೆ ಕಲಾರಿಪಯಟ್ಟು ಸಹಿತ 4 ದೇಸಿ ಕ್ರೀಡೆಗಳನ್ನು ಮುಂದಿನ ವರ್ಷದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ಗೆ ಸೇರ್ಪಡೆಗೊಳಿಸಲು ಕೇಂದ್ರ ಕ್ರೀಡಾ ಸಚಿವಾಲಯ ಒಪ್ಪಿಗೆ ನೀಡಿದೆ.

ಪಂಜಾಬಿ ಸಿಖ್ ಯುದ್ಧಕಲೆ ‘ಗತಕಾ’ ಮತ್ತು ಮಣಿಪುರದ ಯುದ್ಧಕಲೆ ‘ತಂಗ್-ಟಾ’ ಖೇಲ್ ಇಂಡಿಯಾ ಗೇಮ್ಸ್‌ಗೆ ಸೇರ್ಪಡೆ ಗೊಂಡಿರುವ ಮತ್ತೆರಡು ಹೊಸ ಕ್ರೀಡೆಗಳಾಗಿವೆ.

ಯೋಗ ಮತ್ತು ಜಿಮ್ನಾಸ್ಟಿಕ್ಸ್ ಆಸನಗಳ ಜತೆಗೆ ಕುಸ್ತಿಯ ಪಟ್ಟುಗಳನ್ನು ಒಳಗೊಂಡ ಭಾರತದ ಸಾಂಪ್ರದಾಯಿಕ ಕ್ರೀಡೆ ಮಲ್ಲ ಕಂಬ ಸಹಿತ ನಾಲ್ಕು ದೇಸಿ ಕ್ರೀಡೆಗಳು ದೇಶದ ಶ್ರೀಮಂತ ಸಂಸ್ಕೃತಿಯ ಭಾಗವಾಗಿವೆ. ಈ ಕ್ರೀಡೆಗಳನ್ನು ರಕ್ಷಿಸುವುದು, ಪ್ರೋತ್ಸಾಹಿಸುವುದು ಮತ್ತು ಜನಪ್ರಿಯಗೊಳಿಸುವುದು ಕ್ರೀಡಾ ಸಚಿವಾಲಯದ ಜವಾಬ್ದಾರಿಯಾಗಿದೆ ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆ ಲಭಿಸುವುದರೊಂದಿಗೆ ಖೇಲೋ ಇಂಡಿಯಾಗೂ ಸೇರ್ಪಡೆಗೊಂಡಿದ್ದರೆ, ಈ ನಾಲ್ಕು ದೇಸಿ ಕ್ರೀಡೆಗಳು ದೇಶದ ವಿವಿಧ ಭಾಗಗಳಿಗೆ ಸೇರಿದ್ದಾಗಿವೆ ಎಂಬುದು ವಿಶೇಷವಾಗಿದೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಮನ್ನಣೆಯನ್ನು ಪಡೆದಿದೆ. 2021ರ ಖೇಲೋ ಇಂಡಿಯಾ ಯೂತ್ ಗೇಮ್ಸ್ ಹರಿಯಾಣದಲ್ಲಿ ನಿಗದಿಯಾಗಿದೆ.