ಚೆನ್ನೈ: ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ತಂಡದ ನಾಯಕತ್ವದ ಜವಾಬ್ದಾರಿಯಿಂದ ದೂರವಾಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಐಪಿಎಲ್ ಹ್ಯಾಂಡಲ್ ನಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಸಿಎಸ್ ಕೆ ತಂಡದ ಮುಂದಿನ ನಾಯಕನಾಗಿ ಯುವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಅವರನ್ನು ನೇಮಿಸಲಾಗಿದೆ.
17ನೇ ಸೀಸನ್ ನ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಒಂದೇ ದಿನ ಬಾಕಿಯಿದೆ. ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.
ಚೆನ್ನೈನಲ್ಲಿ ನಡೆಯಲಿರುವ 2024ರ ಐಪಿಎಲ್ ನ ಮೊದಲ ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಧೋನಿ ಅವರು ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ‘ಈ ಬಾರಿ ಹೊಸ ಜವಾಬ್ದಾರಿಗೆ ಎದುರು ನೋಡುತ್ತಿರುವುದಾಗಿ’ ಹೇಳಿದ್ದರು. ಅದು ನಾಯಕತ್ವ ಬದಲಾವಣೆ ಬಗ್ಗೆ ಎನ್ನುವುದು ಇದೀಗ ಖಚಿತವಾಗಿದೆ.