ಕೋಲ್ಕತ್ತ: ಎದೆನೋವಿನಿಂದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಅವರು ಮತ್ತೆ ಕೋಲ್ಕತ್ತದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಳವಾರ ರಾತ್ರಿಯಿಂದ ಅಸ್ವಸ್ಥಗೊಂಡಿದ್ದರು. ಬಳಿಕ ಎದೆನೋವು ಕಾಣಿಸಿಕೊಂಡಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಹೃದಯಾಘಾತದ ಸೌಮ್ಯ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ಗಂಗೂಲಿ ಬಳಿಕ ಗುಣಮುಖರಾಗಿ ಬಿಡುಗಡೆಯಾಗಿದ್ದರು.
48 ವರ್ಷ ವಯಸ್ಸಿನ ಗಂಗೂಲಿ ಅವರಿಗೆ ಜನವರಿ 2 ರಂದು ವ್ಯಾಯಾಮ ನಡೆಸುತ್ತಿದ್ದ ವೇಳೆ ಲಘು ಹೃದಯಾಘಾತ ಕಾಣಿಸಿ ಕೊಂಡಿತ್ತು. ಅವರ ಹೃದಯದ ರಕ್ತನಾಳಗಳಲ್ಲಿ ಅಡೆತಡೆ ಕಂಡುಬಂದ ಕಾರಣ ಆಯಂಜಿಯೊಪ್ಲಾಸ್ಟಿ ನಡೆಸಿ, ಒಂದು ಕಡೆ ಸ್ಟಂಟ್ ಆಳವಡಿಸಲಾಗಿತ್ತು.