Tuesday, 5th November 2024

Gautam Gambhir: ಗಂಭೀರ್ ವಿರುದ್ಧ ನಿಯಮ ಉಲ್ಲಂಘನೆ ಆರೋಪ; ಬಿಸಿಸಿಐ ವಿಚಾರಣೆ

ಮುಂಬಯಿ: ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ 3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡ ವೈಟ್‌ವಾಶ್‌ ಮುಖಭಂಗಕ್ಕೆ ಒಳಗಾದ ಬಳಿಕ ಹಲವು ಪ್ರಶ್ನೆಗಳು ಉದ್ಭವಿಸಿವೆ. ತವರಲ್ಲಿ ಬರೋಬ್ಬರಿ 12 ವರ್ಷ ಬಳಿಕ ಸರಣಿ ಸೋತು, 91 ವರ್ಷದಲ್ಲೇ ಮೊದಲ ಬಾರಿ 0-3 ವೈಟ್‌ವಾಶ್‌ ಆಗಿದ್ದರ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದ್ದು, ಹಲವು ಮಾಜಿ ಕ್ರಿಕೆಟಿಗರು ಗೌತಮ್‌ ಗಂಭೀರ್‌(Gautam Gambhir) ಕೋಚಿಂಗ್‌ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇದರ ಬೆನ್ನಲ್ಲೇ ಅಧಿಕಾರ ವಹಿಸಿಕೊಂಡ ಬಳಿಕ ಗಂಭೀರ್‌ ತೆಗೆದುಕೊಂಡ ನಿರ್ಧಾರದ ಬಗ್ಗೆ ಬಿಸಿಸಿಐ(BCCI) ಪ್ರಶ್ನಿಸಲಿದೆ ಎಂದು ವರದಿಯಾಗಿದೆ.

ಮೂಲಗಳ ಪ್ರಕಾರ ಬಿಸಿಸಿಐ ಗೌತಮ್ ಗಂಭೀರ್ ಮತ್ತು ಅವರ ನೇತೃತ್ವದ ಹೊಸ ಸಹಾಯಕ ಸಿಬ್ಬಂದಿ ಜತೆ ಆಸೀಸ್‌ ಪ್ರವಾಸಕ್ಕೂ ಮುನ್ನ ಬಿಸಿಸಿಐ ಸಭೆ ನಡೆಸಿ ತಂಡವನ್ನ ಮುಂದೆ ಕೊಂಡೊಯ್ಯುವ ದೃಷ್ಟಿಕೋನದ ಬಗ್ಗೆ ಪ್ರಶ್ನೆ ಕೇಳಲಾಗುವುದು ಎಂದು ವರದಿಯಾಗಿದೆ.

ಐಪಿಎಲ್‌ನಲ್ಲಿ ಕೆಕೆಆರ್​ ಮೆಂಟರ್​ ಆಗಿ ಟ್ರೋಫಿ ಗೆದ್ದುಕೊಟ್ಟ ಬಳಿಕ ಗಂಭೀರ್‌ ಮೇಲೆ ಅಪಾರ ನಿರೀಕ್ಷೆ ಇರಿಸಲಾಗಿತ್ತು. ಆದರೆ ಭಾರತ ಇವರ ಮಾರ್ಗದರ್ಶನದಲ್ಲಿ ಹಿಂದೆಂದು ಕಾಣದ ಅವಮಾನಕರ ಸೋಲು ಕಾಣುತ್ತಿದೆ. ಆರಂಭದಲ್ಲಿ ಶ್ರೀಲಂಕಾ ಎದುರು 27 ವರ್ಷಗಳ ಬಳಿಕ ಏಕದಿನ ಸರಣಿ ಸೋಲು, ಆ ಬಳಿಕ ಕಿವೀಸ್‌ ವಿರುದ್ಧದ ತವರಿನಲ್ಲಿ ಟೆಸ್ಟ್‌ ಸರಣಿ ಸೋಲು ಎದುರಿಸುವಂತಾಯಿತು.

ಇದನ್ನೂ ಓದಿ IND vs NZ: ಸ್ಪಿನ್‌ ಟ್ರ್ಯಾಕ್‌ನಲ್ಲಿ ಭಾರತವನ್ನು ಪಾಕ್‌ ಕೂಡ ಸೋಲಿಸಬಹುದು ಎಂದ ಮಾಜಿ ಆಟಗಾರ

ಬಿಸಿಸಿಐ ಸಂವಿಧಾನದ ಪ್ರಕಾರ ಮುಖ್ಯ ಕೋಚ್​ಗೆ ಭಾರತ ತಂಡದ ಆಯ್ಕೆಯಲ್ಲಿ ಯಾವುದೇ ಪಾತ್ರವಿಲ್ಲದಿದ್ದರೂ, ಆಸ್ಟ್ರೆಲಿಯಾ ಪ್ರವಾಸದ ತಂಡ ಆಯ್ಕೆಯಲ್ಲಿ ಗಂಭೀರ್​ಗೆ ಪೂರ್ಣ ಸ್ವಾತಂತ್ರ್ಯ ನೀಡಲಾಯಿತು. ಗಂಭೀರ್​ ಆಯ್ಕೆ ಆದ್ಯತೆಯ ಆಧಾರದಲ್ಲೇ ತಂಡವನ್ನು ಕೂಡ ರಚಿಸಲಾಗಿದೆ. ಕಿವೀಸ್​ ವಿರುದ್ಧದ ಸರಣಿಯಲ್ಲಿ ಪಿಚ್​ ಆಯ್ಕೆ ವಿಚಾರದಲ್ಲೂ ಗಂಭೀರ್​ ನಿರ್ಧಾರಕ್ಕೆ ಮನ್ನಣೆ ನೀಡಲಾಯಿತು. ಆದರೆ ಗಂಭೀರ್​ಗೆ ಇದುವರೆಗೆ ನೀಡಲಾಗಿರುವ ಇಷ್ಟೊಂದು ಅಧಿಕಾರಗಳಿಂದ ಯಾವುದೇ ಲಾಭ ಕಂಡುಬಂದಿಲ್ಲ. ಈ ಹಿಂದೆ ಕೋಚ್​ ಆಗಿದ್ದ ರವಿಶಾಸ್ತ್ರಿ, ದ್ರಾವಿಡ್​ಗೂ ಆಯ್ಕೆ ಸಮಿತಿ ಸಭೆಗೆ ಹಾಜರಾಗಲು ಅವಕಾಶ ನೀಡಿರಲಿಲ್ಲ. ಹೀಗಾಗಿ ಆಸ್ಟ್ರೆಲಿಯಾ ಪ್ರವಾಸ ಗಂಭೀರ್​ ಪಾಲಿಗೆ ನಿಜವಾದ ಸತ್ವಪರೀಕ್ಷೆ ಎನಿಸಿದೆ. ಒಂದೊಮ್ಮೆ ಭಾರತ ಆಸೀಸ್‌ನಲ್ಲಿ ಪರಾಭವಗೊಂಡರೆ ಕೋಚ್‌ ಹುದ್ದೆಯಿಂದ ಕಿಕ್‌ ಔಟ್‌ ಆದರೂ ಅಚ್ಚರಿಯಿಲ್ಲ.

ಗಂಭೀರ್​ ತರಬೇತಿಯ ಫಲಿತಾಂಶ

ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ 3-0 ಜಯ

ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ 0-2 ಸೋಲು

ಬಾಂಗ್ಲಾದೇಶ ವಿರುದ್ಧ ಟೆಸ್ಟ್​ ಸರಣಿಯಲ್ಲಿ 2-0 ಜಯ

ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯಲ್ಲಿ 3-0 ಜಯ

ಕಿವೀಸ್‌​ ವಿರುದ್ಧ ಟೆಸ್ಟ್​ ಸರಣಿಯಲ್ಲಿ 0-3 ಸೋಲು