ಬ್ರಿಸ್ಬೇನ್: ಅಂತಿಮ ಟೆಸ್ಟ್ ಪಂದ್ಯದ ನಿರ್ಣಾಯಕ ದಿನ ಒಂದು ವಿಕೆಟ್ ಕಳೆದುಕೊಂಡರೂ ಭಾರತ ತಂಡ ಚೇತರಿಸಿಕೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ.
ರೋಹಿತ್ ಶರ್ಮಾ(7) ವಿಕೆಟ್ ಉರುಳಿಸಿದ್ದು, ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಮತ್ತು ಜವಾಬ್ದಾರಿಯುತ ಆಟ ಪ್ರದರ್ಶಿಸಿರುವ ಶುಭಮನ್ ಗಿಲ್ ಅರ್ಧಶತಕ ಸಿಡಿಸಿದ್ದು, ತಂಡವನ್ನು ಗುರಿಯತ್ತ ಕೊಂಡೊಯ್ಯುವ ಹಾದಿಯಲ್ಲಿದ್ದಾರೆ.
ಭೋಜನ ವಿರಾಮದ ಬಳಿಕ ಭಾರತ 1 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದ್ದು, ಇನ್ನೂ 233 ರನ್ ಅಗತ್ಯವಿದೆ.
ಕಳೆದ ಸೋಮವಾರ ದಿನದಾಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೆ 4 ರನ್ ಗಳಿಸಿದ್ದ ಭಾರತ ಇವತ್ತು ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. 7 ರನ್ ಗಳಿಸಿದ್ದ ರೋಹಿತ್ ಶರ್ಮಾ, ಕಮ್ಮಿನ್ಸ್ ಬೌಲಿಂಗ್ನಲ್ಲಿ ಟಿಮ್ ಪೇನ್ಗೆ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಒಂದಾದ ಶುಭಮನ್ ಗಿಲ್ ಮತ್ತು ಚೇತೇಶ್ವರ್ ಪೂಜಾರ ಜೋಡಿ 63 ರನ್ ಜೊತೆಯಾಟ ನೀಡಿದ್ದು, ಗುರಿಯತ್ತ ಸಾಗುತ್ತಿದ್ದಾರೆ.
ಆಸೀಸ್ ಪರ ಕಮಿನ್ಸ್ ಒಂದು ವಿಕೆಟ್ ಪಡೆದರು. ಸರಣಿ 1-1 ರಲ್ಲಿ ಸಮಬಲವಾಗಿದ್ದು, ಈ ಪಂದ್ಯ ಗೆದ್ದವರಿಗೆ ಸರಣಿ ಒಲಿಯಲಿದೆ. ಪಂದ್ಯ ಡ್ರಾ ಆದಲ್ಲಿ ಬಾರ್ಡರ್- ಗವಾಸ್ಕರ್ ಟ್ರೋಫಿ ಭಾರತದ ಬಳಿ ಉಳಿಯಲಿದೆ.