ನವದೆಹಲಿ: ಭಾರತದ ಆರಂಭಿಕ ಶುಬ್ಮನ್ ಗಿಲ್ ಬುಧವಾರ ಬಿಡುಗಡೆಯಾದ ಐಸಿಸಿ ಪುರುಷರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಅವರ ವಿಶ್ವದ ನಂ.1 ಏಕದಿನ ಬ್ಯಾಟ್ಸ್ಮನ್ ಆಗಿ ಆಳ್ವಿಕೆಯನ್ನ ಕೊನೆಗೊಳಿಸಿದರು.
ವಿಶ್ವಕಪ್ 2023ರಲ್ಲಿ ಭಾರತದ ಅಭಿಯಾನಕ್ಕೆ ಉತ್ತಮ ಆರಂಭದ ಹಿನ್ನೆಲೆಯಲ್ಲಿ ಬಾಬರ್ ಅವರನ್ನ ಹಿಂದಿಕ್ಕಿ ಗಿಲ್ ಅಗ್ರಸ್ಥಾನಕ್ಕೆ ಏರಿದರು. ಈ ಪ್ರಕ್ರಿಯೆ ಯಲ್ಲಿ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ನಂತರ ನಂ.1 ಏಕದಿನ ಬ್ಯಾಟ್ಸ್ಮನ್ ಶ್ರೇಯಾಂಕ ಹೊಂದಿರುವ ತಮ್ಮ ದೇಶದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಶ್ರೀಲಂಕಾ ವಿರುದ್ಧ 92 ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ 23 ರನ್ ಗಳಿಸಿರುವ ಬಲಗೈ ಬ್ಯಾಟ್ಸ್ಮನ್, ಟೂರ್ನಿಯಲ್ಲಿ ಈವರೆಗೆ ಆರು ಇನ್ನಿಂಗ್ಸ್ಗಳಿಂದ 219 ರನ್ ಗಳಿಸಿದ್ದಾರೆ.
ಬಾಬರ್ ಎಂಟು ಇನ್ನಿಂನ್ಸ್ ಗಳಿಂದ ಒಟ್ಟು 282 ರನ್ ಗಳಿಸಿದ್ದಾರೆ. ಪಾಕಿಸ್ತಾನದ ದಿಗ್ಗಜ ಆಟಗಾರ ಗಿಲ್ ಗಿಂತ ಆರು ರೇಟಿಂಗ್ ಅಂಕಗಳನ್ನ ಕಳೆದು ಕೊಂಡು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಗಿಲ್ ಪ್ರಸ್ತುತ 830 ರೇಟಿಂಗ್ ಪಾಯಿಂಟ್ ಹೊಂದಿದ್ದರೆ, ಬಾಬರ್ (824) ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ (771) ನಂತರದ ಸ್ಥಾನದಲ್ಲಿದ್ದಾರೆ.