ನವದೆಹಲಿ: ಗೂಂಗಾ ಪೈಲ್ವಾನ್(ಮೂಕ ಕುಸ್ತಿಪಟು) ಎಂದು ಹೇಳಿಕೊಳ್ಳುವ ವಿರೇಂದ್ರ ಸಿಂಗ್ ಅವರೂ ತಮ್ಮ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡುವು ದಾಗಿ ಘೋಷಿಸಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಸಿಂಗ್ ನಿಕಟವರ್ತಿಯೊಬ್ಬರು ಕುಸ್ತಿ ಫೆಡರೇಷನ್‌ಗೆ ಆಯ್ಕೆಯಾಗಿರುವುದನ್ನು ವಿರೋಧಿಸಿ ಕುಸ್ತಿಪಟು ಬಜರಂಗ ಪುನಿಯಾ ತಮ್ಮ ಪದ್ಮಶ್ರೀ ಪ್ರಶಸ್ತಿ ವಾಪಸ್ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಅನ್ಯಾಯ ವಿರೋಧಿಸಿ ನಿವೃತ್ತಿ ಘೋಷಿಸಿದ ಸಾಕ್ಷಿ ಮಲಿಕ್ ಅವರಿಗೆ ಬೆಂಬಲ ನೀಡುವುದಕ್ಕಾಗಿ ಪದ್ಮಶ್ರೀ ಪ್ರಶಸ್ತಿ ವಾಪಸ್ ನೀಡುತ್ತಿರುವುದಾಗಿ ವೀರೇಂದ್ರ ಸಿಂಗ್ ಹೇಳಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಬಾಕ್ಸರ್ ವಿಜೇಂದರ್ ಸಿಂಗ್ ಕೂಡ ಮಲಿಕ್‌ಗೆ ಬೆಂಬಲ ಘೋಷಿಸಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟಕ್ಕೆ ಮಾಜಿ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಆಯ್ಕೆಯಾದ ಬಳಿಕ ಅಂತಾರಾಷ್ಟ್ರೀಯ ಕುಸ್ತಿಪಟು ಗಳ ಬಣವೊಂದು ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದಿದೆ. ಪ್ರಶಸ್ತಿ ನೀಡಲು ಹೋಗುತ್ತಿದ್ದ ಅವರಿಗೆ ತಡೆಯೊಡ್ಡಿದ್ದ ಕಾರಣ ಪದಕವನ್ನು ಅವರು ನವದೆಹಲಿಯ ಕರ್ತವ್ಯ ಪಥದ ಫುಟ್ಪಾತ್ನಲ್ಲಿಟ್ಟು ಮರಳಿದ್ದಾರೆ.
ಕರ್ತವ್ಯ ಪಥದಲ್ಲಿ ಪದ್ಮಶ್ರೀ ಬಿಟ್ಟು ಹೊರಬಂದ ನಂತರ ಮಾತನಾಡಿದ ಪುನಿಯಾ, ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಪ್ರಧಾನಿ ನರೇಂದ್ರ ಮೋದಿ ಯವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.