Friday, 22nd November 2024

ಗುಜರಾತ್‌ನ್ನು ಗೆಲ್ಲಿಸಿದ ಮಿಲ್ಲರ್, ತೆವಾಟಿಯಾ

ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಶನಿವಾರದ ಪಂದ್ಯದಲ್ಲಿ ಆರು ವಿಕೆಟ್‌ಗಳ ಅಂತರದಿಂದ ಜಯ ದಾಖಲಿಸಿರುವ ಗುಜರಾತ್ ಟೈಟಾನ್ಸ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ವಿರಾಟ್ ಕೊಹ್ಲಿ 14 ಪಂದ್ಯಗಳ ಬಳಿಕ ಮೊದಲ ಬಾರಿ ಐಪಿಎಲ್‌ನಲ್ಲಿ ಅರ್ಧ ಶತಕ ಸಿಡಿಸಿದರು. ಈ ಋತುವಿನಲ್ಲಿ ಆರ್‌ಸಿಬಿರ ಪರ ಆಡಿದ 9ನೇ ಪಂದ್ಯದಲ್ಲಿ 58 ರನ್ (53 ಎಸೆತ, 6 ಬೌಂಡರಿ, 1 ಸಿಕ್ಸರ್) ಗಳಿಸಿದ ಕೊಹ್ಲಿ ಚೊಚ್ಚಲ ಅರ್ಧಶತಕ(52 ರನ್, 32 ಎಸೆತ)ಸಿಡಿಸಿದ ರಜತ್ ಪಾಟಿದಾರ್ ಅವರೊಂದಿಗೆ 2ನೇ ವಿಕೆಟ್‌ಗೆ 99 ರನ್ ಸೇರಿಸಿ ತಂಡವು 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಲು ನೆರವಾದರು.

ಕೊಹ್ಲಿ ಔಟಾಗಿ ಪೆವಿಲಿಯನ್ ಸಾಗುವಾಗ ಎದ್ದುನಿಂತು ಗೌರವಿಸಲಾಯಿತು. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ 18 ಎಸೆತಗಳಲ್ಲಿ 33 ರನ್ ಗಳಿಸಿದರು. ನಾಯಕ ಪ್ಲೆಸಿಸ್ ಖಾತೆ ತೆರೆಯಲು ವಿಫಲರಾದರು.

ಗೆಲ್ಲಲು 171 ರನ್ ಗುರಿ ಬೆನ್ನಟ್ಟಿದ ಗುಜರಾತ್ ತಂಡ 13ನೇ ಓವರ್‌ನಲ್ಲಿ 95 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ರಾಹುಲ್ ತೆವಾಟಿಯ(ಔಟಾಗದೆ 43 ರನ್) ಹಾಗೂ ಡೇವಿಡ್ ಮಿಲ್ಲರ್(ಔಟಾಗದೆ 39 ರನ್) ಸಾಹಸದಿಂದ 19.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು.

ಶುಭಮನ್ ಗಿಲ್(31 ರನ್) ಹಾಗೂ ವೃದ್ದಿಮಾನ್ ಸಹಾ(29 ರನ್) ಮೊದಲ ವಿಕೆಟ್‌ಗೆ 51ರ ನ್ ಜೊತೆಯಾಟ ನಡೆಸಿ ಗುಜರಾತ್‌ಗೆ ಉತ್ತಮ ಆರಂಭ ಒದಗಿಸಿದರು. ಗಿಲ್ ವಿಕೆಟ್ ಕಬಳಿಸಿದ ಶಹಬಾಝ್ ಅಹ್ಮದ್ ಈ ಜೋಡಿಯನ್ನು ಬೇರ್ಪಡಿಸಿದರು. ನಾಯಕ ಹಾರ್ದಿಕ್ ಪಾಂಡ್ಯ(3 ರನ್)ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಔಟಾದರು. ಸಾಯಿ ಸುದರ್ಶನ್‌ಗೆ(20 ರನ್) ಹಸರಂಗಗೆ(2-28) ವಿಕೆಟ್ ಒಪ್ಪಿಸಿದರು.

ಗುಜರಾತ್ ಗೆಲುವಿಗೆ 6 ಓವರ್‌ಗಳಲ್ಲಿ 71 ರನ್ ಅಗತ್ಯವಿದ್ದಾಗ ಡೇವಿಡ್ ಮಿಲ್ಲರ್ ಹಾಗೂ ತೆವಾಟಿಯಾ ಆರ್‌ಸಿಬಿ ಬೌಲರ್‌ಗಳನ್ನು ಚೆನ್ನಾಗಿ ದಂಡಿಸಿದರು. ಹಸರಂಗ ಎಸೆದ 15ನೇ ಓವರ್‌ನಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 15 ರನ್ ಗಳಿಸಿದ ಮಿಲ್ಲರ್ ಗೆಲುವಿನ ವಿಶ್ವಾಸ ಮೂಡಿಸಿದರು.

ಸಿರಾಜ್ ಎಸೆದ 16ನೇ ಓವರ್‌ನಲ್ಲಿ 2 ಬೌಂಡರಿ ಸಿಡಿಸಿದ ರಾಹುಲ್ ತೆವಾಟಿಯಾ ಒಟ್ಟು 15 ರನ್ ಗಳಿಸಿ ಗುಜರಾತ್ ಒತ್ತಡ ಕಡಿಮೆ ಮಾಡಿದರು. ಹರ್ಷಲ್ 17ನೇ ಓವರ್‌ನಲ್ಲಿ ಕೇವಲ 7 ರನ್ ನೀಡಿದರು. ಆದರೆ, 18ನೇ ಓವರ್ ಎಸೆದ ಹೇಝಲ್‌ವುಡ್ 17 ರನ್ ನೀಡಿದರು. ಈ ಓವರ್‌ನಲ್ಲಿ ತೆವಾಟಿಯಾ ತಲಾ 1 ಬೌಂಡರಿ, ಸಿಕ್ಸರ್ ಸಿಡಿಸಿದರೆ, ಮಿಲ್ಲರ್ ಒಂದು ಬೌಂಡರಿ ಗಳಿಸಿದರು.19ನೇ ಓವರ್‌ನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ತೆವಾಟಿಯಾ ಗುಜರಾತ್‌ನ್ನು ಗೆಲ್ಲಿಸಿದರು.