ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 178 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಗುಜರಾತ್ ಟೈಟಾನ್ಸ್ 4 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಶುಭಮನ್ ಗಿಲ್ 36 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 63 ರನ್ ಬಾರಿಸಿ ತಂಡವನ್ನು ಗೆಲುವಿ ನತ್ತ ಮುನ್ನಡೆಸಿದರು.
ವೃದ್ದಿಮಾನ್ ಸಾಹ 16 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸೇರಿದ 25 ರನ್ ಸಿಡಿಸಿದರೆ, ಸಾಯಿ ಸುದರ್ಶನ್ 17 ಎಸೆತಗಳಲ್ಲಿ 3 ಬೌಂಡರಿ ಒಳಗೊಂಡ 22 ರನ್ ಬಾರಿಸಿದರು. ವಿಜಯ್ ಶಂಕರ್ 21 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸೇರಿದ 27 ರನ್ ಸಿಡಿಸಿದರು. ಕೊನೆಯಲ್ಲಿ ರಶೀದ್ ಖಾನ್ 3 ಎಸೆತದಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್ ನೊಂದಿಗೆ 10 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 8 ರನ್ ಬಾರಿಸಿ ಔಟಾಗಿ ನಿರಾಸೆ ಮೂಡಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕ ಋತುರಾಜ್ ಗಾಯಕ್ವಾಡ್ 50 ಎಸೆತಗಳಲ್ಲಿ 4 ಬೌಂಡರಿ ಮತ್ತು 9 ಸಿಕ್ಸರ್ ಸಹಾಯದಿಂದ 92 ರನ್ ಸಿಡಿಸಿದ್ದಾಗ ಔಟಾಗಿ 8 ರನ್ ಗಳಿಂದ ಶತಕ ವಂಚಿತರಾದರು. ಬೌನ್ಸರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಋತುರಾಜ್ 2ನೇ ಶತಕ ಬಾರಿಸಿದ 9ನೇ ಆಟಗಾರ ಹಾಗೂ ಉದ್ಘಾಟನಾ ಪಂದ್ಯದಲ್ಲಿ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ಮಾಡುವ ಅವಕಾಶದಿಂದ ವಂಚಿತರಾದರು.
ಮೊಯಿನ್ ಅಲಿ (23), ಶಿವಂ ದುಬೆ (17) ರನ್ ಬಾರಿಸಿದರು. ಗುಜರಾತ್ ಪರ ರಶೀದ್ ಖಾನ್, ಮೊಹಮದ್ ಶಮಿ ಮತ್ತು ಅಲ್ಜರಿ ಜೋಸೆಫ್ ತಲಾ 2 ವಿಕೆಟ್ ಪಡೆದರು.