Sunday, 24th November 2024

Happy Birthday Anil Kumble: ಕುಂಬ್ಳೆಗೆ 54ನೇ ಜನ್ಮದಿನದ ಸಂಭ್ರಮ: ವಿಶೇಷವಾಗಿ ಶುಭ ಹಾರೈಸಿದ ಆರ್‌ಸಿಬಿ

ಬೆಂಗಳೂರು: ಭಾರತೀಯ ಕ್ರಿಕೆಟ್‌ ಇತಿಹಾಸ ಕಂಡ ಅತ್ಯಂತ ಯಶಸ್ವಿ ಬೌಲರ್‌ ಎನಿಸಿರುವ ಕರ್ನಾಟಕದ ಸ್ಪಿನ್‌ ಮಾಂತ್ರಿಕ ಅನಿಲ್‌ ಕುಂಬ್ಳೆ(Anil Kumble) ಅವರಿಗೆ ಗುರುವಾರ 54ನೇ ಜನ್ಮದಿನದ(Happy Birthday Anil Kumble) ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ ಮಾಜಿ ಸಹ-ಆಟಗಾರರು, ಹಾಲಿ ಕ್ರಿಕೆಟಿಗರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಐಪಿಎಲ್‌ ತಂಡವಾರ ಆರ್‌ಸಿಬಿ ವಿಶೇಷವಾಗಿ ಕುಂಬ್ಳೆ ಅವರಿಗೆ ಶುಭ ಹಾರೈಸಿದೆ. ಆರ್‌ಸಿಬಿಯೊಂದಿಗೆ ಮತ್ತು ಬೆಂಗಳೂರಿನಲ್ಲಿ ಅವರು ಕಳೆದ ಸುಂದರ ಕ್ಷಣಗಳ ಫೋಟೊವನ್ನು ಕೊಲಾಜ್‌ ಮಾಡಿ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

1970ರ ಅಕ್ಟೋಬರ್‌ 17ರಂದು ಜನಿಸಿದ ಅನಿಲ್‌ ಕುಂಬ್ಳೆ ಭಾರತ ತಂಡದ ಪರ 132 ಟೆಸ್ಟ್‌ ಮತ್ತು 271 ಏಕದಿನ ಪಂದ್ಯಗಳಲ್ಲಿ ಕ್ರಮವಾಗಿ 619 ಮತ್ತು 337 ವಿಕೆಟ್‌ ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತ ಪರ 900ಕ್ಕೂ ಅಧಿಕ ವಿಕೆಟ್‌ ಕಬಳಿಸಿದ ಏಕೈಕ ಬೌಲರ್‌ ಎಂಬ ಹೆಗ್ಗಳಿಕೆ ಅವರದಾಗಿದೆ.

ಇದನ್ನೂ ಓದಿ ICC Hall of Fame: ಕುಕ್, ನೀತು ಡೇವಿಡ್, ಎಬಿಡಿಗೆ; ‘ಐಸಿಸಿ ಹಾಲ್‌ ಆಫ್‌ ಫೇಮ್‌’ ಗೌರವ

ಇನಿಂಗ್ಸ್‌ ಒಂದರ ಎಲ್ಲ 10 ವಿಕೆಟ್‌ ಕಬಳಿಸಿದ್ದರಿಂದ, ತಲೆಗೆ ಬ್ಯಾಂಡೇಜ್‌ ಸುತ್ತಿಕೊಂಡು ಆಡಿದ್ದರವರೆಗೆ ಭಾರತ ಕಂಡ ಅತ್ಯುತ್ತಮ ಮ್ಯಾಚ್‌ ವಿನ್ನರ್‌ಗೆ ಜನ್ಮದಿನದ ಶುಭಾಶಯಗಳು ಎಂದು ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌ ಸೇರಿದತೆ ಹಲವು ಭಾರತೀಯ ಮಾಜಿ ಕ್ರಿಕೆಟಿಗರು ಕುಂಬ್ಳೆಗೆ ಶುಭಾಶಯ ಕೋರಿ ಹಾರೈಸಿದ್ದಾರೆ.

ಭಾರತೀಯ ಕ್ರಿಕೆಟ್‌ನಲ್ಲಿ ‘ಜಂಬೋ’ ಎಂದು ಕರೆಯಲ್ಪಡುವ ಅನಿಲ್ ಕುಂಬ್ಳೆ ಅವರದ್ದು ಅತ್ಯಂತ ಸರಳ ಜೀವನ. ಅವರ 18 ವರ್ಷಗಳ ಕ್ರಿಕೆಟ್ ಜೀವನದಲ್ಲಿ, ಅವರ ಹೆಸರು ಎಂದಿಗೂ ಯಾವುದೇ ವಿವಾದಕ್ಕೆ ಒಳಗಾಗಲಿಲ್ಲ. ಕ್ರಿಕೆಟ್ ಮೈದಾನದಲ್ಲಿ ಕುಂಬ್ಳೆ ಅವರು ನಾಯಕ ಮತ್ತು ಆಟಗಾರನಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರು. ಸ್ಪಿನ್ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ ಕುಂಬ್ಳೆ ಟೀಂ ಇಂಡಿಯಾ ನಾಯಕತ್ವವನ್ನೂ ವಹಿಸಿದ್ದರು. ನಿವೃತ್ತಿಯ ನಂತರ ಭಾರತ ತಂಡದ ಕೋಚ್ ಜವಾಬ್ದಾರಿಯನ್ನೂ ವಹಿಸಿದ್ದರು.

ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅನಿಲ್ ಕುಂಬ್ಳೆ ಅವಿಸ್ಮರಣೀಯ ಸಾಧನೆ ಮಾಡಿದ್ದು ಎಂದೂ ಕೂಡ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಟೆಸ್ಟ್ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್ ಪಡೆದು ವಿಶ್ವ ದಾಖಲೆ ನಿರ್ಮಿಸಿದ್ದರು. ಅವರ ಸ್ಪಿನ್‌ ಜಾದೂ ಮುಂದೆ ಪಾಕ್‌ ಬ್ಯಾಟರ್‌ಗಳ ವಿಕೆಟ್‌ ತರಗೆಲೆಯಂತೆ ಉದುರಿಹೋಗಿತ್ತು.