Monday, 25th November 2024

Hardik Pandya Catch: ಪಾಂಡ್ಯ ಸ್ಟನ್ನಿಂಗ್‌ ಕ್ಯಾಚ್‌ಗೆ ಫ್ಯಾನ್ಸ್‌ ಫಿದಾ; ವಿಡಿಯೊ ವೈರಲ್‌

ನವದೆಹಲಿ: ಅರುಣ್‌ ಜೇಟ್ಲಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಬುಧವಾರ ರಾತ್ರಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟಿ20(India vs Bangladesh 2nd T20I) ಪಂದ್ಯದಲ್ಲಿ ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹಿಡಿದ ಸ್ಟನ್ನಿಂಗ್‌ ಕ್ಯಾಚ್‌(Hardik Pandya Catch) ಕಂಡು ನೆರೆದಿದ್ದ ಪ್ರೇಕ್ಷಕರು ನಿಬ್ಬೆರಗಾಗಿದ್ದಾರೆ. ಪಾಂಡ್ಯ ಹಿಡಿದ ಈ ಕ್ಯಾಚ್‌ನ ವಿಡಿಯೊ ವೈರಲ್‌ ಆಗಿದ್ದು ನೆಟ್ಟಿಗರು ವಿಭಿನ್ನ ಕಮೆಂಟ್‌ ಮಾಡಿದ್ದಾರೆ.

ಬಾಂಗ್ಲಾ ಬ್ಯಾಟಿಂಗ್‌ ವೇಳೆ 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದ ರಿಶಾದ್ ಹೊಸೈನ್ ಅವರು ವರುಣ್‌ ಚರ್ಕವತ್ರಿ ಎಸೆತವನ್ನು ಲಾಂಗ್‌ ಆಫ್‌ನತ್ತ ಬಾರಿಸಿದರು. ಬೌಂಡರಿ ಲೈನ್‌ ಬಳಿಕ ಫೀಲ್ಡಿಂಗ್‌ ನಡೆಸುತ್ತಿದ್ದ ಹಾರ್ದಿಕ್‌ ಪಾಂಡ್ಯ ಚಿರತೆ ವೇಗದಲ್ಲಿ ಓಡಿ ಬಂದು ಒಂದೇ ಕೈಯಲ್ಲಿ ಕ್ಯಾಚ್‌ ಹಿಡಿಯುವಲ್ಲಿ ಯಶಸ್ವಿಯಾದರು. ಈ ಕ್ಯಾಚ್‌ ಕಂಡ ಪ್ರೇಕ್ಷಕರು ಒಂದು ಕ್ಷಣ ನಿಬ್ಬೆರಗಾದರು.

ಪಾಂಡ್ಯ ಹಿಡಿದ ಈ ಕ್ಯಾಚ್‌ನ ವಿಡಿಯೊ ಕಂಡ ನೆಟ್ಟಿಗರು ವಿಭಿನ್ನ ಕಮೆಂಟ್‌ ಮಾಡಿದ್ದಾರೆ. ಉಸ್ಮಾನ್‌ ಎನ್ನುವ ನೆಟ್ಟಿಗ ಇದು ಈ ವರ್ಷದ ಅತ್ಯುತ್ತಮ ಕ್ಯಾಚ್‌ ಎಂದು ಬಣ್ಣಿಸಿದರೆ, ಜನಕ್ ಪೂಜಾರ ಎನ್ನುವಾತ ಫಿಟ್ನೆಸ್ ಸಮಸ್ಯೆಯಿಂದಾಗಿ ಈ ವ್ಯಕ್ತಿಗೆ ನಾಯಕತ್ವ ಸಿಗಲಿಲ್ಲ, ವಿಚಿತ್ರ ಎಂದು ಹಾಸ್ಯಮಯ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ INDW vs SLW: ಅರ್ಧಶತಕ ಬಾರಿಸಿ ದಾಖಲೆ ಬರೆದ ಮಂಧಾನ

ಮೊದಲ ಪಂದ್ಯದಲ್ಲಿ ಬೌಲಿಂಗ್‌ ನಡೆಸಿದ್ದ ಪಾಂಡ್ಯ ಈ ಪಂದ್ಯದಲ್ಲಿ ಕೇವಲ ಬ್ಯಾಟಿಂಗ್‌ ಮಾತ್ರ ನಡೆಸಿದರು. 19 ಎಸೆತ ಎದುರಿಸಿದ ಪಾಂಡ್ಯ ತಲಾ 2 ಸಿಕ್ಸರ್‌ ಮತ್ತು ಬೌಂಡರಿ ನೆರವಿನಿಂದ 32 ರನ್‌ ಬಾರಿಸಿದರು. ಮೊದಲ ಪಂದ್ಯದಲ್ಲಿ ಅಜೇಯ 39 ರನ್‌ ಸಹಿತ 1 ವಿಕೆಟ್‌ ಪಡೆದಿದ್ದರು. ನೂತನ ಟಿ20 ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿಯೂ ಪಾಂಡ್ಯ 4 ಸ್ಥಾನಗಳ ಪ್ರಗತಿ ಸಾಧಿಸಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಸರಣಿ ಗೆದ್ದ ಭಾರತ

ದ್ವಿತೀಯ ಪಂದ್ಯದಲ್ಲಿ 86 ರನ್‌ಗಳ ಗೆಲುವು ಸಾಧಿಸಿದ ಭಾರತ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಇದೇ ವೇಳೆ ಭಾರತ ತಂಡ ತವರಿನಲ್ಲಿ ಸತತ 7ನೇ ಟಿ20 ಸರಣಿ ಗೆಲುವು ಸಾಧಿಸಿದ ಹಿರಿಮೆಗೆ ಪಾತ್ರವಾಯಿತು. 2022ರ ಬಳಿಕ ಭಾರತ ತವರಿನಲ್ಲಿ ಸರಣಿ ಸೋತಿಲ್ಲ. ಇನ್ನು ಡ್ರಾಗೊಂಡ ಸರಣಿಗಳನ್ನೂ ಪರಿಗಣಿಸಿದರೆ, ಭಾರತ ಸತತ 15ನೇ ಸರಣಿಯಲ್ಲಿ ಅಜೇಯವಾಗಿ ಉಳಿದಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ಯುವ ಆಟಗಾರ ನಿತೀಶ್‌ ರೆಡ್ಡಿ ಮತ್ತು ರಿಂಕು ಸಿಂಗ್‌ ಬಾರಿಸಿದ ಅರ್ಧಶತಕದ ನೆರವಿನಿಂದ 9 ವಿಕೆಟ್‌ಗೆ 221 ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 9 ವಿಕೆಟ್‌ಗೆ 135 ರನ್‌ ಗಳಿಸಲಷ್ಟೇ ಶಕ್ತವಾಯಿತು. ಸ್ಫೋಟಕ ಬ್ಯಾಟಿಂಗ್‌ ನಡೆಸಿದ ನಿತೀಶ್‌ 34 ಎಸೆತದಲ್ಲಿ 4 ಬೌಂಡರಿ, 7 ಸಿಕ್ಸರ್‌ಗಳೊಂದಿಗೆ 74 ರನ್‌ ಸಿಡಿಸಿದರೆ, ರಿಂಕು ಸಿಂಗ್‌ 29 ಎಸೆತದಲ್ಲಿ 5 ಬೌಂಡರಿ, 3 ಸಿಕ್ಸರ್‌ಗಳೊಂದಿಗೆ 53 ರನ್‌ ಚಚ್ಚಿದರು. ಇವರಿಬ್ಬರ ನಡುವೆ 4ನೇ ವಿಕೆಟ್‌ಗೆ 8 ಓವರಲ್ಲಿ 108 ರನ್‌ ಜತೆಯಾಟ ಮೂಡಿಬಂತು.