Saturday, 23rd November 2024

Hardik Pandya: ಟೆಸ್ಟ್​ ಕ್ರಿಕೆಟ್​ಗೆ ಹಾರ್ದಿಕ್​ ಪಾಂಡ್ಯ ಪುನರಾಗಮನ?

Hardik Pandya

ಮುಂಬಯಿ: ಭಾರತ ತಂಡದ ಆಲ್‌ರೌಂಡರ್‌ ಹಾರ್ದಿಕ್​ ಪಾಂಡ್ಯ(Hardik Pandya) ಮತ್ತೆ ರೆಡ್‌ ಬಾಲ್‌ ಕ್ರಿಕೆಟ್‌ನತ್ತ ಮರಳಲು ಸಿದ್ಧತೆ ಆರಂಭಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ ಆಡುವುದಕ್ಕೆ ಪೂರ್ವಭಾವಿಯಾಗಿ ಮುಂಬರುವ ರಣಜಿ ಟ್ರೋಫಿಯಲ್ಲಿ ಬರೋಡ ತಂಡದ ಪರ ಆಡಲಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್​ 11ರಿಂದ ರಣಜಿ ಟ್ರೋಫಿ(Ranji Trophy) ದೇಶೀಯ ಕ್ರಿಕೆಟ್​ ಟೂರ್ನಿ ಶುರುವಾಗಲಿದೆ. ಬರೋಡ ತಂಡ ಮುಂಬೈ ವಿರುದ್ಧ ಮೊದಲ ಪಂದ್ಯ ಆಡಲಿದೆ.

ಹಾರ್ದಿಕ್​ ಪಾಂಡ್ಯ ಕಳೆದ 6 ವರ್ಷಗಳಿಂದ ಟೆಸ್ಟ್​ ಪಂದ್ಯ ಆಡಿಲ್ಲ. 2018ರ ಆಗಸ್ಟ್​-ಸೆಪ್ಟೆಂಬರ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೌಥಾಂಪ್ಟನ್​ನಲ್ಲಿ ಕೊನೇಯ ಟೆಸ್ಟ್​ ಆಡಿದ್ದರು. ಆ ಬಳಿಕ ಫಿಟ್ನೆಸ್​ ಸಮಸ್ಯೆಯಿಂದಾಗಿ ಅವರು ಟೆಸ್ಟ್​ ಕ್ರಿಕೆಟ್​ನಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. ಇದೀಗ ಸುದೀರ್ಘ ಸಮಯದ ಬಳಿಕ ಮತ್ತೆ ರೆಡ್‌ ಬಾಲ್‌ ಆಡಲು ನಿರ್ಧರಿಸಿದ್ದಾರೆ. ಬಿಸಿಸಿಐ ಪಾಂಡ್ಯಗೆ ರಣಜಿ ಆಡುವಂತೆ ಸೂಚನೆ ನೀಡಿದೆ ಎನ್ನಲಾಗಿದೆ. ವರ್ಷಾಂತ್ಯದಲ್ಲಿ ಆಸ್ಟ್ರೆಲಿಯಾ ವಿರುದ್ಧ ನಡೆಯುವ 5 ಪಂದ್ಯಗಳ ಬಾರ್ಡರ್‌-ಗವಾಸ್ಕರ್‌(Border Gavaskar Trophy) ಟೆಸ್ಟ್‌ ಸರಣಿಗೆ ಪಾಂಡ್ಯ ಅವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಈ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಅಭ್ಯಾಸ ಆರಂಭಿಸಿದ ಪಾಂಡ್ಯ

ಬಿಸಿಸಿಐ ಸೂಚನೆಯಂತೆ ಹಾರ್ದಿಕ್‌ ಪಾಂಡ್ಯ ಈಗಾಗಲೆ ಕೆಂಪು ಚೆಂಡಿನಲ್ಲಿ ಬೌಲಿಂಗ್​ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಕಳೆದ ವಾರ ಅವರು ಇಂಗ್ಲೆಂಡ್​ನಲ್ಲಿ ಕೆಂಪು ಚೆಂಡಿನಲ್ಲಿ ಬೌಲಿಂಗ್​ ಮಾಡುತ್ತಿರುವ ವಿಡಿಯೋ ಕೂಡ ವೈರಲ್​ ಆಗಿತ್ತು. ನ್ಯೂಜಿಲ್ಯಾಂಡ್‌​ ವಿರುದ್ಧದ ತವರಿನ 3 ಪಂದ್ಯಗಳ ಟೆಸ್ಟ್​ ಸರಣಿಯಲ್ಲೂ ಪಾಂಡ್ಯ ಭಾರತ ತಂಡದ ಭಾಗವಾದರೆ ಅಚ್ಚರಿ ಇಲ್ಲ ಎನ್ನಲಾಗಿದೆ.

ಇದನ್ನೂ ಓದಿ IND vs BAN: ಬುಮ್ರಾ ಯಾರ್ಕರ್‌ ದಾಳಿಗೆ ಕಂಪಿಸಿದ ಬಾಂಗ್ಲಾ; ಭಾರತಕ್ಕೆ 308 ರನ್‌ ಲೀಡ್‌

30 ವರ್ಷದ ಹಾರ್ದಿಕ್​ ಪಾಂಡ್ಯ ಇದುವರೆಗೆ ಭಾರತ ಪರ 11 ಟೆಸ್ಟ್​ ಆಡಿದ್ದು, 1 ಶತಕ, 4 ಅರ್ಧಶತಕ ಸಹಿತ 532 ರನ್​ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿ 17 ವಿಕೆಟ್​ ಕಬಳಿಸಿದ್ದಾರೆ. ಇದರಲ್ಲಿ ಒಂದು 5 ವಿಕೆಟ್​ ಗೊಂಚಲು ಕೂಡ ಸೇರಿದೆ. ಪಾಂಡ್ಯ ಟೆಸ್ಟ್‌ಗೆ ಮರಳಿದರೆ ಭಾರತ ತಂಡದ ಮಧ್ಯಮ ಕ್ರಮಾಂಕ ಮತ್ತಷ್ಟು ಬಲಿಷ್ಠಗೊಳ್ಳಲಿದೆ. ಜತೆಗೆ ತಂಡಕ್ಕೊಂದು ಫುಲ್‌ ಪ್ಯಾಕೆಜ್‌ ಸಿಕ್ಕಂತಾಗುತ್ತದೆ. ಏಕೆಂದರೆ ಪಾಂಡ್ಯ ಬ್ಯಾಟಿಂಗ್‌ ಜತೆಗೆ ಬೌಲಿಂಗ್‌ ಕೂಡ ಮಾಡಬಲ್ಲರು. ಸದ್ಯ ಪಾಂಡ್ಯ ಹೊರತುಪಡಿಸಿ ಭಾರತ ತಂಡದಲ್ಲಿ ವೇಗದ ಬೌಲಿಂಗ್‌ ಆಲ್‌ರೌಂಡರ್‌ ಯಾರು ಇಲ್ಲ.

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಚಾಂಪಿಯನ್‌ ಆಗುವಲ್ಲಿ ಪಾಂಡ್ಯ ಪ್ರಮುಖ ಪಾತ್ರವಹಿಸಿದ್ದರು. ಬೌಲಿಂಗ್‌ ಸೇರಿ ಬ್ಯಾಟಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ್ದರು. ಶ್ರೀಲಂಕಾ ಪ್ರವಾಸದ ಚುಟುಕು ಕ್ರಿಕೆಟ್​ ಸರಣಿಯಲ್ಲಿ ಆಡಿದ ಬಳಿಕ ಪಾಂಡ್ಯ ವಿಶ್ರಾಂತಿಯಲ್ಲಿದ್ದಾರೆ. ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ನಿರೀಕ್ಷೆ ಇದೆ.