Friday, 22nd November 2024

Hardik Pandya: ಮುಂಬೈ ತೊರೆಯುತ್ತಾರಾ ಪಾಂಡ್ಯ?; ಸುಳಿವು ನೀಡಿದ ಪೋಸ್ಟ್‌

ಮುಂಬಯಿ: ಮುಂಬೈ ಇಂಡಿಯನ್ಸ್‌(mumbai indians) ತಂಡದ ನಾಯಕ ಹಾರ್ದಿಕ್‌ ಪಾಂಡ್ಯ(Hardik Pandya) ಐಪಿಎಲ್‌ 2025ರ(IPL 2025) ರಿಟೇನ್‌ ಪ್ರಕ್ರಿಯೆಗೂ ಮುನ್ನವೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟೊಂದನ್ನು ಹಾಕಿ ತೀವ್ರ ಕುತೂಹಲ ಮೂಡಿಸಿದ್ದಾರೆ. ʼಸದ್ಯದಲ್ಲೇ ಬಹುದೊಡ್ಡ ಸಂಗತಿಯೊಂದನ್ನು ಪ್ರಕಟಿಸಲಿದ್ದೇನೆʼ ಎಂದು ಬರೆದುಕೊಂಡಿದ್ದಾರೆ. ಅವರ ಈ ರಹಸ್ಯ ಪೋಸ್ಟ್‌ ನೋಡುವಾಗ ಮುಂಬೈ ತಂಡ ತೊರೆಯುವ ಸೂಚನೆ ನೀಡಿದಂತಿದೆ.

ಆಟಗಾರರನ್ನು ರಿಟೇನ್ ಮಾಡಿಕೊಳ್ಳಲು ಅಕ್ಟೋಬರ್‌ 31 ಅಂತಿಮ ದಿನವಾಗಿದೆ. ಮೂಲಗಳ ಪ್ರಕಾರ ಮುಂಬೈ ​ ಪಾಂಡ್ಯರನ್ನು ರಿಟೇನ್‌ ಮಾಡಿಕೊಂಡರೂ ನಾಯಕತ್ವ ನೀಡದಿರಲು ನಿರ್ಧರಿಸಿದೆ ಎನ್ನಲಾಗಿದೆ. ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​ ಅವರಿಗೇ ಮುಂಬೈ ನಾಯಕತ್ವವೂ ಒಲಿಯಲಿದೆ ಎನ್ನಲಾಗಿದೆ.
ಇದರಿಂದಾಗಿ ಹಾರ್ದಿಕ್‌​ ಮುಂಬೈ ತಂಡದಿಂದ ಹೊರನಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಪಾಂಡ್ಯ ಪೋಸ್ಟ್‌ ಮಾಡಿದ್ದು ಕೂಡ ಇದಕ್ಕೆ ಪುಷ್ಠಿ ತುಂಬಿದೆ.

ಗುಜರಾತ್‌ ಟೈಟಾನ್ಸ್‌ ತಂಡದ ನಾಯಕನಾಗಿದ್ದ ಹಾರ್ದಿಕ್‌ ಪಾಂಡ್ಯ ಅವರನ್ನು 17ನೇ ಆವೃತ್ತಿಯ ಐಪಿಎಲ್‌ ವೇಳೆ ಮುಂಬೈ ಟ್ರೇಡ್‌ ಮೂಲಕ ತನ್ನ ತಂಡಕ್ಕೆ ಖರೀದಿಸಿ ರೋಹಿತ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಈ ಪಟ್ಟವನ್ನು ಪಾಂಡ್ಯಗೆ ನೀಡಲಾಗಿತ್ತು. ಆದರೆ ಪಾಂಡ್ಯ ಸಾರಥ್ಯದಲ್ಲಿ ತಂಡ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಪಾಂಡ್ಯ ಲಕ್ನೋ ತಂಡದ ನಾಯಕನಾಗುವ ಸಾಧ್ಯತೆ ಕಂಡುಬಂದಿದೆ.

ಸದ್ಯದ ಮಾಹಿ ಪ್ರಕಾರ ಮುಂಬೈ ತಂಡ ರೋಹಿತ್​ ಶರ್ಮ (18 ಕೋಟಿ ರೂ.), ಜಸ್​ಪ್ರೀತ್​ ಬುಮ್ರಾ (18 ಕೋಟಿ ರೂ.), ಹಾರ್ದಿಕ್​ ಪಾಂಡ್ಯ (14 ಕೋಟಿ ರೂ.), ಸೂರ್ಯಕುಮಾರ್​ ಯಾದವ್​ (14 ಕೋಟಿ ರೂ.), ತಿಲಕ್​ ವರ್ಮ (11 ಕೋಟಿ ರೂ.) ಅವರನ್ನು ರಿಟೇನ್​ ಮಾಡಿಕೊಳ್ಳಲು ಬಯಸಿದೆ ಎನ್ನಲಾಗಿದೆ. ಜತೆಗೆ ನೇಹಲ್​ ವಧೇರ (4 ಕೋಟಿ) ಅವರನ್ನು ಅನ್​ಕ್ಯಾಪ್ಡ್​ ಆಗಿ ಉಳಿಸಿಕೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ IPL 2025: ಆರ್‌ಸಿಬಿ ರಿಟೈನ್‌ ಪಟ್ಟಿ ಅಂತಿಮ; ಕೊಹ್ಲಿ ಮೊದಲ ಆಯ್ಕೆ

18ನೇ ಆವೃತ್ತಿಯ(IPL 2025 Auction) ಆಟಗಾರರ ಹರಾಜು ಪ್ರಕ್ರಿಯೆ ಸೌದಿ ಅರೇಬಿಯದ ರಿಯಾದ್‌ನಲ್ಲಿ(IPL 2025 auction Riyadh) ನವೆಂಬರ್ 24 ಮತ್ತು 25ರಂದು ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ವೇಳಾಪಟ್ಟಿಯ ಬಗ್ಗೆ ಐಪಿಎಲ್ ಫ್ರಾಂಚೈಸಿಗಳಿಗೆ ಅನೌಪಚಾರಿಕವಾಗಿ ತಿಳಿಸಲಾಗಿದೆ ಎಂದು ವರದಿಯಾಗಿದೆ. ಐಪಿಎಲ್‌ ರೀಟೆನ್ಷನ್‌ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ಮೊದಲ ಆಟಗಾರನಿಗೆ 18 ಕೋಟಿ, 2ನೇ ಆಟಗಾರನಿಗೆ 14 ಕೋಟಿ, 3ನೇ ಆಟಗಾರನಿಗೆ 11 ಕೋಟಿ ವೇತನ ನಿಗದಿಪಡಿಸಲಾಗಿದೆ. 4 ಹಾಗೂ 5ನೇ ಆಟಗಾರನಿಗೆ ಕ್ರಮವಾಗಿ 18 ಕೋಟಿ ಹಾಗೂ 14 ಕೋಟಿ ನೀಡಬಹುದಾಗಿದೆ. ಅಂ.ರಾ. ಕ್ರಿಕೆಟ್‌ ಆಡದ ಆಟಗಾರನನ್ನು 4 ಕೋಟಿಗೆ ಉಳಿಸಿಕೊಳ್ಳಬಹುದು. ಒಟ್ಟಾರೆ ಆಟಗಾರರ ಖರೀದಿಗೆ ತಂಡಗಳು ₹120 ಕೋಟಿ ವೆಚ್ಚ ಮಾಡಬಹುದಾಗಿದ್ದು, ಹರಾಜಿಗೂ ಮೊದಲೇ 79 ಕೋಟಿಯನ್ನು ಆಟಗಾರರನ್ನು ಉಳಿಸಿಕೊಳ್ಳಲು ಬಳಸಿಕೊಳ್ಳಬಹುದು.