ಮುಂಬಯಿ: ಪ್ರಸಕ್ತ ಸಾಗುತ್ತಿರುವ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ(Womens T20 World Cup) ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್‌ನಿಂದಲೇ ಭಾರತ ತಂಡ ಹೊರಬಿದ್ದಿತ್ತು. ಇದೀಗ ನಾಯಕಿ ಹರ್ಮನ್‌ಪ್ರೀತ್ ಕೌರ್(Harmanpreet Kaur) ತಲೆದಂಡವಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಬಿಸಿಸಿಐ(BCCI) ಆಯ್ಕೆ ಸಮಿತಿ ಜತೆ ಸಭೆ ಕೆರೆದಿದ್ದು ಕೌರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ಮತ್ತು ಟೀಮ್ ಇಂಡಿಯಾದಲ್ಲಿ ಅವರ ಸ್ಥಾನದ ಬಗ್ಗೆ ಚರ್ಚಿಸಲಿದೆ ಎಂದು ವರದಿಯಾಗಿದೆ.
ಆಟಗಾರ್ತಿಯಾಗಿ ಕೌರ್ ಹಲವು ಸಾಧನೆ ತೋರಿದ್ದರೂ ಕೂಡ ನಾಯಕಿಯಾಗಿ ಭಾರತಕ್ಕೆ ದೊಡ್ಡ ಕೊಡುಗೆ ನೀಡಿಲ್ಲ. ಇದೇ ವರ್ಷ ನಡೆದಿದ್ದ ಏಷ್ಯಾಕಪ್ ಟೂರ್ನಿಯಲ್ಲಿಯೂ ಭಾರತ ಸೋಲು ಕಂಡಿತ್ತು. ನಾಯಕಿಯಾಗಿ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಕೌರ್ ಕಳೆದ ಕೆಲ ವರ್ಷಗಳಿಂದ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಎಲ್ಲ ಪಂದ್ಯಗಳಲ್ಲಿಯೂ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ.
ಇದನ್ನೂ ಓದಿ INDW vs NZW: ದಂಡದ ಭೀತಿಯಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್
ಕ್ರಿಕ್‌ಬಜ್ ವರದಿ ಪ್ರಕಾರ ಟಿ20 ವಿಶ್ವಕಪ್ ಟೂರ್ನಿಯಿಂದ ಭಾರತ ಹೊರಬಿದ್ದ ಕಾರಣ ತಂಡದ ಮುಖ್ಯ ಕೋಚ್ ಅಮೋಲ್ ಮಜುಂದಾರ್ ಮತ್ತು ಆಯ್ಕೆದಾರರೊಂದಿಗೆ ಮಂಡಳಿಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದ ಬಗ್ಗೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.
ಅಕ್ಟೋಬರ್ 24 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡುವ ಮೊದಲು ಈ ಸಭೆ ನಡೆಯಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸ್ಮೃತಿ ಮಂಧಾನ ಅವರಿಗೆ ನಾಯಕತ್ವ ನೀಡಲಾಗುವುದು ಎನ್ನಲಾಗಿದೆ. ಅವರು ಈಗಾಗಲೇ ತಂಡದ ಉಪನಾಯಕಿಯಾಗಿದ್ದಾರೆ.
1999ರಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕ್ರಿಕೆಟ್ ಪರಿಚಯವಾದ ನಂತರ 2022 ರಲ್ಲಿ ಭಾರತದ ಮಹಿಳಾ ತಂಡ ಕೌರ್ ಅವರ ನಾಯಕತ್ವದಲ್ಲೇ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಕಳೆದ ವರ್ಷ ನಡೆದಿದ್ದ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದದ್ದು ಕೂಡ ಕೌರ್ ಸಾಧನೆಯಾಗಿದೆ. ಇದನ್ನು ಹೊರತುಪಡಿಸಿ ಐಸಿಸಿ ಟ್ರೋಫಿ ಗೆದ್ದಿಲ್ಲ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ 2020 ಟಿ20 ವಿಶ್ವಕಪ್ ಫೈನಲ್ ತಲುಪಿತ್ತು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋಲು ಕಂಡಿತ್ತು. ಅಂದಿನಿಂದ ತಂಡದ ಪ್ರದರ್ಶನದಲ್ಲಿ ಕುಸಿತ ಕಂಡುಬಂದಿದೆ.
35ರ ಹರೆಯದ ಹರ್ಮನ್‌ಪ್ರೀತ್ ಕೌರ್ 2017ರಲ್ಲಿ ಆಸ್ಟ್ರೇಲಿಯ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಕೇವಲ 115 ಎಸೆತ ಎದುರಿಸಿ ಅಜೇಯ 171 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದ್ದರು. ಕಳೆದ ವರ್ಷ ಹರ್ಮನ್‌ಪ್ರೀತ್ ಕೌರ್ ಅವರಿಗೆ ಪ್ರತಿಷ್ಠಿತ ವಿಸ್ಡನ್ ಪ್ರಶಸ್ತಿ(wisden awards 2023) ಒಲಿದಿತ್ತು. ವರ್ಷದ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಹರ್ಮನ್‌ಪ್ರೀತ್ ಕೌರ್ ಪಾತ್ರರಾಗಿದ್ದರು.
ಕೌರ್ ಭಾರತ ಪರ 133 ಏಕದಿನ ಪಂದ್ಯಗಳನ್ನು ಆಡಿ ಸದ್ಯ 3565 ರನ್ ಬಾರಿಸಿದ್ದಾರೆ. ಇದರಲ್ಲಿ 6 ಶತಕ ಮತ್ತು 18 ಅರ್ಧಶತಕ ಒಳಗೊಂಡಿದೆ. 177 ಟಿ20 ಪಂದ್ಯಗಳಿಂದ 3576 ರನ್ ಗಳಿಸಿದ್ದಾರೆ. ಒಂದು ಶತಕ ಹಾಗೂ 14 ಅರ್ಧಶತಕ ಬಾರಿಸಿದ್ದಾರೆ.