Tuesday, 10th September 2024

Harvinder Singh: ಆರ್ಚರಿಯಲ್ಲಿ ಐತಿಹಾಸಿಕ ಪದಕ ಗೆದ್ದ ಹರ್ವಿಂದರ್ ಪಿಎಚ್‌.ಡಿ ಪದವೀಧರ

Harvinder Singh

ಬೆಂಗಳೂರು: ಪ್ಯಾರಾಲಿಂಪಿಕ್ಸ್‌ನ ಆರ್ಚರಿ ಸ್ಪರ್ಧೆಯಲ್ಲಿ ಹರ್ವಿಂದರ್ ಸಿಂಗ್(Harvinder Singh) ಚಿನ್ನದ ಪದಕ ಗೆಲ್ಲುವ ಮೂಲಕ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ಎರಡೂ ಕ್ರೀಡಾಕೂಟಗಳ ಆರ್ಚರಿಯಲ್ಲಿ ಭಾರತಕ್ಕೆ ಚೊಚ್ಚಲ ಚಿನ್ನದ ಪದಕೊಂದನ್ನು ತಂದುಕೊಟ್ಟಿದ್ದಾರೆ.

ಬುಧವಾರ ತಡರಾತ್ರಿ ನಡೆದ ಫೈನಲ್‌ನಲ್ಲಿ 33 ವರ್ಷದ ಹರ್ವಿಂದರ್ ಪೋಲೆಂಡ್‌ ಲುಕಾಸ್ ಸಿಜೆಕ್ ವಿರುದ್ಧ 6-0 ಅಂತರದಲ್ಲಿ ಗೆಲುವು ಸಾಧಿಸಿದರು. ಹರ್ವಿಂದರ್‌ಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದ 2ನೇ ಪದಕ ಇದಾಗಿದೆ. ಕಳೆದ ಟೋಕಿಯೋ ಪ್ಯಾರಾಗೇಮ್ಸ್‌ನಲ್ಲಿ ಅವರು ಕಂಚಿನ ಪದಕ ಗೆದ್ದು ಪ್ಯಾರಾಲಿಂಪಿಕ್ಸ್‌ ಆರ್ಚರಿ ಇತಿಹಾಸದಲ್ಲಿ ಭಾರತ ಮೊದಲ ಪದಕ ತಂದುಕೊಟ್ಟಿದ್ದರು. ಈ ಬಾರಿ ಸ್ವರ್ಣಕ್ಕೆ ಮುತ್ತಿಕ್ಕಿ ಐತಿಹಾಸಿಕ ಸಾಧನೆ ತೋರಿದರು.

ವೈದ್ಯರ ಎಡವಟ್ಟಿನಿಂದ ಕಾಲುಗಳ ಸ್ವಾಧೀನ ಕಳೆದುಕೊಂಡ ಹರ್ವಿಂದರ್‌

ಹರ್ವಿಂದರ್‌ ಸಿಂಗ್‌ ಹರ್ಯಾಣದ ಕೈಥಾಲ್‌ ಸಮೀಪದ ಗುಹ್ಲಾ ಚೀಕಾ ಗ್ರಾಮದವರು. ಕೇವಲ ಒಂದೂವರೆ ವರ್ಷದ ಮಗುವಾಗಿರುವಾಗ ಹರ್ವಿಂದರ್‌ಗೆ ಡೆಂಗ್ಯೂ ಕಾಡಿತ್ತು. ಸ್ಥಳೀಯ ವೈದ್ಯರೊಬ್ಬರು ನೀಡಿದ ಇಂಜೆಕ್ಷನ್‌ ಪರಿಣಾಮವಾಗಿ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಳ್ಳಬೇಕಾಯಿತು. ಕ್ರೀಡೆಯಲ್ಲಿ ಮಾತ್ರವಲ್ಲದೆ ಓದಿನಲ್ಲೂ ಮುಂದಿರುವ ಹರ್ವಿಂದರ್‌ ಸಿಂಗ್‌ ಪಟಿಯಾಲದ ಪಂಜಾಬಿ ವಿವಿಯಲ್ಲಿ ಅರ್ಥಶಾಸ್ತ್ರ ಪಿಎಚ್‌.ಡಿ ಪಡೆದಿದ್ದಾರೆ.

2012 ರ ಲಂಡನ್ ಪ್ಯಾರಾಲಿಂಪಿಕ್ಸ್‌ನಿಂದ ಪ್ರೇರಿತರಾದ ಹರ್ವಿಂದರ್ ಬಿಲ್ಲುಗಾರಿಕೆಯನ್ನು ತೊಡಗಿಸಿಕೊಂಡರು. 2017 ರಲ್ಲಿ ನಡೆದ ಪ್ಯಾರಾ ಆರ್ಚರಿ ವರ್ಲ್ಡ್ ಚಾಂಪಿಯನ್‌ಶಿಪ್‌ ಅವರ ಚೊಚ್ಚಲ ಪಂದ್ಯವಾಗಿತ್ತು. ಅಲ್ಲಿ ಅವರು ಏಳನೇ ಸ್ಥಾನ ಪಡೆದಿದ್ದರು. ಇದಾದ ಒಂದು ವರ್ಷದ ನಂತರ 2018 ರಲ್ಲಿ ಜಕಾರ್ತಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನವನ್ನು ಗೆದ್ದು ಸಂಭ್ರಮಿಸಿದ್ದರು. ಇಲ್ಲಿಂದ ಮೇಲೆ ಅವರ ಪದಕ ಬೇಟೆ ಆರಂಭವಾಯಿತು.

ಇದಕ್ಕೂ ಓದಿ Paris Paralympics: ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಧರಂಬೀರ್, ಬೆಳ್ಳಿ ಗೆದ್ದ ಪ್ರಣವ್; 25 ಪದಕ ಸನಿಹದಲ್ಲಿ ಭಾರತ

ಸದ್ಯ ಭಾರತ 24 ಪದಕ ಗೆದ್ದು ಪದಕಪಟ್ಟಿಯಲ್ಲಿ 15ನೇ ಸ್ಥಾನಿಯಾಗಿದೆ. 5 ಚಿನ್ನ, 6 ಬೆಳ್ಳಿ, 10 ಕಂಚು ಒಳಗೊಂಡಿದೆ. ಬುಧವಾರ ತಡರಾತ್ರಿ ಭಾರತಕ್ಕೆ ಒಟ್ಟು 3 ಪದಕ ಒಲಿದಿತ್ತು. 2 ಚಿನ್ನ ಮತ್ತು 1 ಬೆಳ್ಳಿ. ಪುರುಷರ ಕ್ಲಬ್ ಥ್ರೋ F51 ಸ್ಪರ್ಧೆಯಲ್ಲಿ ಭಾರತದ ಧರಂಬೀರ್(Dharambir ) ಚಿನ್ನದ ಪದಕವನ್ನು ಗೆದ್ದರೆ, ಮತೋರ್ವ ಭಾರತೀಯ ಪ್ರಣವ್ ಸೂರ್ಮಾ(Pranav Soorma ) ಬೆಳ್ಳಿ ಪದಕ ಗೆದ್ದರು. ಕ್ಲಬ್ ಥ್ರೋ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಪದಕ ಇದಾಗಿದೆ.

ಧರಂಬೀರ್ 34.92 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಏಷ್ಯನ್ ದಾಖಲೆಯನ್ನು ಮುರಿದು ಅಗ್ರಸ್ಥಾನದೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು. ಧರ್ಮಬೀರ್ ಮೊದಲ 4 ಯತ್ನಗಳನ್ನು ಫೌಲ್ ಮಾಡಿದರೂ, 5ನೇ ಯತ್ನದಲ್ಲಿ 34.92 ಮೀ. ದೂರಕ್ಕೆ ಎಸೆದು ಮೊದಲ ಸ್ಥಾನ ಪಡೆದರು. ಪ್ರಣವ್ ಸೂರ್ಮಾ 34.59 ಮೀಟರ್‌ ದೂರ ಕ್ರಮಿಸಿ ಬೆಳ್ಳಿ ಪದಕ ಪಡೆದರು.

Leave a Reply

Your email address will not be published. Required fields are marked *