ಪ್ಯಾರಿಸ್: ಪ್ಯಾರಿಸ್ ಆರ್ಚರಿ ವರ್ಲ್ಡ್ ಕಪ್’ನಲ್ಲಿ ಭಾನುವಾರ ಭಾರತ ಬಂಗಾರದ ಹ್ಯಾಟ್ರಿಕ್ ಸಾಧಿಸಿತು. ಸ್ವರ್ಣ ಸಾಧನೆಯಲ್ಲಿ ಆರ್ಚರ್ ದೀಪಿಕಾ ಕುಮಾರಿ ಪಾಲು ಮಹತ್ವದ್ದಾಗಿತ್ತು.
ಆರಂಭದಲ್ಲಿ ವನಿತಾ ರಿಕರ್ವ್ ತಂಡ ಸ್ವರ್ಣ ಪದಕ ಜಯಿಸಿತು. ಬಳಿಕ ಅತನು ದಾಸ್-ದೀಪಿಕಾ ಕುಮಾರಿ ಮಿಶ್ರ ತಂಡ ವಿಭಾಗದಲ್ಲಿ ಬಂಗಾರ ಬೇಟೆಯಾಡಿತು. ಕೊನೆಯಲ್ಲಿ ವೈಯಕ್ತಿಕ ರಿಕರ್ವ್ ಸ್ಪರ್ಧೆಯಲ್ಲೂ ದೀಪಿಕಾ ಚಿನ್ನವನ್ನು ಕೊರಳಿಗೆ ಅಲಂಕರಿಸಿಕೊಂಡರು. ಈ ಕೂಟದಲ್ಲಿ ಭಾರತ ಗೆದ್ದ ಚಿನ್ನದ ಸಂಖ್ಯೆ 4ಕ್ಕೆ ಏರಿತು. ಶನಿವಾರ ಅಭಿಷೇಕ್ ವರ್ಮ ಬಂಗಾರದ ಖಾತೆ ತೆರೆದಿದ್ದರು.
ವನಿತಾ ರಿಕರ್ವ್ ತಂಡದಲ್ಲಿ ದೀಪಿಕಾ ಜತೆಗಿದ್ದ ಉಳಿದಿಬ್ಬರೆಂದರೆ ಅಂಕಿತಾ ಭಕತ್ ಮತ್ತು ಕೋಮಲಿಕಾ ಬಾರಿ. ಮೆಕ್ಸಿಕೊ ವಿರುದ್ಧ 5-1 ಅಂತರದ ಗೆಲುವು ಸಾಧಿಸಿ ಚಿನ್ನದೊಂದಿಗೆ ಬೀಗಿ ದರು.
ಇದೇ ವರ್ಷ ಗ್ವಾಟೆಮಾಲಾ ಸಿಟಿಯಲ್ಲಿ ನಡೆದ ವಿಶ್ವಕಪ್ ಸ್ಪರ್ಧೆಯಲ್ಲೂ ಚಿನ್ನಕ್ಕೆ ಗುರಿ ಇರಿಸಿದ್ದರು. ಒಟ್ಟಾರೆ ವಿಶ್ವಕಪ್ ವನಿತಾ ರಿಕರ್ವ್ ಸ್ಪರ್ಧೆಯಲ್ಲಿ ಭಾರತ ಗೆದ್ದ 6ನೇ ಸ್ವರ್ಣ ಇದಾಗಿದೆ. ಮಿಶ್ರ ಡಬಲ್ಸ್‌ನಲ್ಲಿ ಅತನು ದಾಸ್-ದೀಪಿಕಾ ಕುಮಾರಿ ದಂಪತಿ ಚಿನ್ನ ಗೆಲ್ಲುವ ಮೂಲಕ ಜೂ. 30ರ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಹೊಸ ರಂಗು ತುಂಬಿದರು. ಬರ್ಗ್-ಗ್ಯಾಬ್ರಿಯೇಲಾ ಕ್ಲೋಸರ್ ವಿರುದ್ಧ 0-2 ಹಿನ್ನಡೆಯ ಬಳಿಕ ತಿರುಗಿ ಬಿದ್ದ ಅತನು-ದೀಪಿಕಾ, ಅಂತಿಮವಾಗಿ 5-3ರಿಂದ ಗೆಲುವು ಸಾಧಿಸಿದರು.
ಇದು ದೀಪಿಕಾ ಗೆದ್ದ ಮೊದಲ ಮಿಶ್ರ ಡಬಲ್ಸ್ ಸ್ವರ್ಣ. ಹಿಂದಿನ ಕೂಟಗಳಲ್ಲಿ 5 ಬೆಳ್ಳಿ, 3 ಕಂಚನ್ನಷ್ಟೇ ಜಯಿಸಿದ್ದರು. ಅಂದಿನ ಜತೆಗಾರ ಕೂಡ ಅತನು ದಾಸ್ ಆಗಿದ್ದರು. ಆದರೆ ಅಂದು ಈ ಜೋಡಿ ಕೊರಿಯಾ ವಿರುದ್ಧ ಪರಾಭವಗೊಂಡಿತ್ತು. ವೈಯಕ್ತಿಕ ರಿಕರ್ವ್ ಸಿಂಗಲ್ಸ್ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ರಶ್ಯದ ಎಲೆನಾ ಒಸಿಪೋವಾ ವಿರುದ್ಧ 6-0 ಅಂತರದ ಅಮೋಘ ಗೆಲುವು ಸಾಧಿಸಿದರು.