Thursday, 19th September 2024

ಹಿಟ್‌ ಮ್ಯಾನ್‌ ಶತಕ, ಪೂಜಾರ ಅರ್ಧಶತಕ, 171 ರನ್‌ ಮುನ್ನಡೆಯಲ್ಲಿ ಭಾರತ

ಲಂಡನ್: ಹಿಟ್ ಮ್ಯಾನ್ ರೋಹಿತ್ ಶರ್ಮಾ ಶತಕ(127) ಹಾಗೂ ಚೇತೇಶ್ವರ್ ಪೂಜಾರ(61) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಪ್ರವಾಸಿ ಭಾರತ ತಂಡ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ದಿನದ ಗೌರವ ಸಾಧಿಸಿದೆ.

ಶನಿವಾರ ಮೂರನೇ ದಿನದಾಟವನ್ನು ಭಾರತ ವಿಕೆಟ್ ನಷ್ಟವಿಲ್ಲದೆ 43 ರನ್ ಗಳಿಂದ ಆರಂಭಿಸಿ, ದಿನದಾಟದಂತ್ಯಕ್ಕೆ ಎರಡನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಗೆ 270 ರನ್ ಕಲೆ ಹಾಕಿತು. ನಾಯಕ ವಿರಾಟ್ ಕೊಹ್ಲಿ (ಅಜೇಯ 22) ಹಾಗೂ ರವೀಂದ್ರ ಜಡೇಜಾ (ಅಜೇಯ 9) ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿ ದ್ದಾರೆ. ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್ ನಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವತ್ತ ಚಿತ್ತ ನೆಟ್ಟಿದೆ.

ಸಿಕ್ಸರ್ ಮೂಲಕ ಶತಕ ಪೂರೈಸಿದ ರೋಹಿತ್ ಶರ್ಮಾ, ವಿದೇಶಿ ನೆಲದಲ್ಲಿ ಮೊದಲ ಸೆಂಚುರಿ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. 8 ವರ್ಷಗಳ ರೋಹಿತ್ ಶರ್ಮಾ ಟೆಸ್ಟ್ ಕರಿಯರ್‌ನಲ್ಲಿ ವಿದೇಶಿ ನೆಲದಲ್ಲಿ ಮೂಡಿ ಬಂದ ಮೊದಲ ಶತಕ ಇದು. ವಿದೇಶಿ ನೆಲದಲ್ಲಿ ರೋಹಿತ್ ಶರ್ಮಾ ಆರಂಭಿಕನಾಗಿ ಕಣಕ್ಕಿಳಿದ 6ನೇ ಟೆಸ್ಟ್ ಪಂದ್ಯದಲ್ಲಿ ಶತಕ ದಾಖಲಾಗಿದೆ.

ರೋಹಿಟ್ ಮೈಲಿಗಲ್ಲು

ಭರ್ಜರಿ ಶತಕ ಸಿಡಿಸುವ ಮೂಲಕ ವಿದೇಶಿ ನೆಲದಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದ ರೋಹಿತ್ ಶರ್ಮ ಇದೇ ವೇಳೆ ಹಲವು ಮೈಲಿಗಲ್ಲು ನಿರ್ಮಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ಸಾವಿರ ರನ್, ಆರಂಭಿಕರಾಗಿ 11 ಸಾವಿರ ರನ್, ಟೆಸ್ಟ್ ಕ್ರಿಕೆಟ್‌ ನಲ್ಲಿ 3 ಸಾವಿರ ರನ್, ಇಂಗ್ಲೆಂಡ್‌ನಲ್ಲಿ ಆಡಿದ ಅಂತಾ ರಾಷ್ಟ್ರೀಯ ಪಂದ್ಯಗಳಲ್ಲಿ 2 ಸಾವಿರ ರನ್ ಮತ್ತು 2021ರಲ್ಲಿ 1 ಸಾವಿರ ರನ್ ಪೂರೈಸಿದ ಸಾಧನೆಯನ್ನು ರೋಹಿತ್ ಈ ಇನಿಂಗ್ಸ್‌ನಲ್ಲಿ ದಾಖಲಿಸಿದರು.  ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ಸಾವಿರ ರನ್ ಪೂರೈಸಿದ 8ನೇ ಹಾಗೂ ಆರಂಭಿಕರಾಗಿ 11 ಸಾವಿರ ರನ್ ಪೂರೈಸಿದ 4ನೇ ಭಾರತೀಯರೆನಿಸಿದರು.

ಸಿಕ್ಸರ್ ಮೂಲಕ ಶತಕ
ಮೊದಲ 7 ಶತಕಗಳನ್ನೂ ಭಾರತದಲ್ಲೇ ದಾಖಲಿಸಿದ್ದ ರೋಹಿತ್ 8ನೇ ಶತಕವನ್ನು ವಿದೇಶದಲ್ಲಿ, ಅದರಲ್ಲೂ ಕ್ರಿಕೆಟ್ ಜನಕರ ನಾಡಿನಲ್ಲಿ ಸಿಡಿಸಿದರು. ಮೊಯಿನ್ ಅಲಿ ಎಸೆತದಲ್ಲಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಸಾಧನೆ ಮಾಡಿದ್ದು ವಿಶೇಷವಾಗಿತ್ತು. 3ನೇ ಬಾರಿ ಸಿಕ್ಸರ್ ಮೂಲಕ ಶತಕ ಪೂರೈಸಿದ ಸಾಧನೆ ಮಾಡಿದರು. ಸಚಿನ್ ತೆಂಡುಲ್ಕರ್ 6 ಬಾರಿ ಇಂಥ ಸಾಧನೆ ಮಾಡಿ ಮುಂಚೂಣಿಯಲ್ಲಿದ್ದಾರೆ.

ರೋಹಿತ್ ಶರ್ಮ ಶತಕ ಪೂರೈಸಲು 204 ಎಸೆತ ಎದುರಿಸಿದರು. ಇದು ಅವರ ಅತಿ ನಿಧಾನಗತಿ ಶತಕವಾಗಿದೆ. 2013ರಲ್ಲಿ ವಿಂಡೀಸ್ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ 194 ಎಸೆತಗಳಲ್ಲಿ ಶತಕ ಸಿಡಿಸಿದ್ದು ಹಿಂದಿನ ನಿಧಾನಗತಿ.

ರೋಹಿತ್ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ತವರು ಮತ್ತು ವಿದೇಶದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯರೆನಿಸಿದರು. ರೋಹಿತ್ ವಿದೇಶದಲ್ಲಿ ಮೊದಲ ಶತಕ ಸಿಡಿಸುವುದಕ್ಕಿಂತ ಮುನ್ನ ತವರಿನಲ್ಲಿ ಅತ್ಯಧಿಕ 7 ಶತಕ ಸಿಡಿಸಿದ ಭಾರತೀರೆನಿಸಿದರು. ಮೊಹಮದ್ ಅಜರುದ್ದೀನ್ ತವರಿನಲ್ಲಿ 6 ಶತಕ ಸಿಡಿಸಿದ ಬಳಿಕ ವಿದೇಶದಲ್ಲಿ ಶತಕ ಗಳಿಸಿದ್ದು ಹಿಂದಿನ ದಾಖಲೆ.

Leave a Reply

Your email address will not be published. Required fields are marked *