Saturday, 14th December 2024

ಆತಿಥೇಯರ ಬಿಗಿ ಹಿಡಿತ, ಮುಖ ಕಿವುಚಿಕೊಂಡ ಕಿವೀಸ್

ಕಾನ್ಪುರ: ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಗೆಲುವಿನತ್ತ ದಾಪುಗಾಲಿಟ್ಟಿದೆ. ಅಜಿಂಕ್ಯ ರಹಾನೆ ಪಡೆ ಗ್ರೀನ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಕಿವೀಸ್ ತಂಡಕ್ಕೆ 284 ರನ್ ಗೆಲುವಿನ ಗುರಿ ನೀಡಿದೆ.

ಪ್ರವಾಸಿ ನ್ಯೂಜಿಲೆಂಡ್ ತಂಡದ ಎದುರು ಬಲಿಷ್ಠ ನಿರ್ವಹಣೆ ತೋರಲು ಯಶಸ್ವಿಯಾದ ಭಾರತದ ಗೆಲುವಿಗೆ ಕಡೇ ದಿನದಾಟದಲ್ಲಿ 9 ವಿಕೆಟ್ ಅವಶ್ಯತೆಯಿದ್ದರೆ, ಪ್ರವಾಸಿ ತಂಡ ಭಾರತದ ಸ್ಪಿನ್ ದಾಳಿಯನ್ನು ಸಮರ್ಥ ವಾಗಿ ಎದುರಿಸಿದರಷ್ಟೇ ಪ್ರತಿ ಹೋರಾಟ ತೋರುವ ಅವಕಾಶ ಹೊಂದಿದೆ.

ಭಾನುವಾರ 1 ವಿಕೆಟ್‌ಗೆ 14 ರನ್‌ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ಭಾರತ ತಂಡ, ವೇಗಿಗಳಾದ ಟಿಮ್ ಸೌಥಿ (75ಕ್ಕೆ 3) ಹಾಗೂ ಕೈಲ್ ಜೇಮಿಸನ್ (40ಕ್ಕೆ 3) ಮಾರಕ ದಾಳಿಗೆ ನಲುಗಿ ಒಂದು ಹಂತದಲ್ಲಿ 51 ರನ್‌ಗಳಿಗೆ 5 ವಿಕೆಟ್ ಕೈಚೆಲ್ಲಿತು. ಬಳಿಕ ಶ್ರೇಯಸ್ ಅಯ್ಯರ್ (65ರನ್), ಆರ್.ಅಶ್ವಿನ್ (32 ರನ್) ಹಾಗೂ ಕುತ್ತಿಗೆ ನೋವಿನ ನಡುವೆಯೂ ಬ್ಯಾಟಿಂಗ್‌ಗಿಳಿದ ವೃದ್ಧಿಮಾನ್ ಸಾಹ (61*ರನ್) ಆಕರ್ಷಕ ಅರ್ಧಶತಕದ ನೆರವಿನಿಂದ 7 ವಿಕೆಟ್‌ಗೆ 234 ರನ್‌ ಗಳಿಸಿ ದ್ವಿತೀಯ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು. ಪ್ರತಿಯಾಗಿ ನ್ಯೂಜಿ ಲೆಂಡ್ ತಂಡ ಆರಂಭಿಕ ಆಘಾತ ಎದುರಿಸಿದ್ದು, ದಿನದಂತ್ಯಕ್ಕೆ 4 ಓವರ್‌ಗಳಲ್ಲಿ 1 ವಿಕೆಟ್‌ಗೆ 4 ರನ್‌ಗಳಿಸಿದೆ.

ಕೇನ್ ವಿಲಿಯಮ್ಸನ್ ಪಡೆ ಜಯ ದಾಖಲಿಸಲು ಇನ್ನೂ 280 ರನ್ ಪೇರಿಸಬೇಕಿದೆ.

ಭಾರತ: 345 ಮತ್ತು 7 ವಿಕೆಟ್‌ಗೆ 234 ಡಿಕ್ಲೇರ್

ನ್ಯೂಜಿಲೆಂಡ್: 296 ಮತ್ತು 4 ಓವರ್‌ಗಳಲ್ಲಿ 1 ವಿಕೆಟ್‌ಗೆ 4