ದುಬೈ: 2024 ಸಾಲಿನ ಪ್ರತಿಷ್ಠಿತ ಐಸಿಸಿ ಹಾಲ್ ಆಫ್ ಫೇಮ್(ICC Hall of Fame) ಪ್ರಶಸ್ತಿಗೆ ಇಂಗ್ಲೆಂಡ್‌ನ ಅಲಸ್ಟೇರ್ ಕುಕ್(113), ಭಾರತ ಮಹಿಳಾ ತಂಡದ ನೀತು ಡೇವಿಡ್(114) ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್(115) ಹೆಸರನ್ನು ಸೇರ್ಪಡೆಗೊಳಿಸಲಾಗಿದೆ. ಈ ಮೂವರ ಸೇರ್ಪಡೆಯೊಂದಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದವರ ಸಂಖ್ಯೆ 115ಕ್ಕೆ ಏರಿದೆ.
ಅಲಸ್ಟೇರ್ ಕುಕ್
ಜಾಗತಿಕ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಅಲಸ್ಟೇರ್ ಕುಕ್(Alastair Cook) ಕೂಡ ಒಬ್ಬರು. ಟೆಸ್ಟ್ ಕ್ರಿಕೆಟ್‌ನಲ್ಲಿ 161 ಪಂದ್ಯಗಳನ್ನಾಡಿ 12,472 ರನ್, ಏಕದಿನದಲ್ಲಿ 3,204 ರನ್, ಟಿ20 ಯಲ್ಲಿ 61 ಸಂಪಾದಿಸಿದ್ದಾರೆ. 2006ರಲ್ಲಿ ಕುಕ್ ಅವರು ಭಾರತ ವಿರುದ್ಧದ ನಾಗ್ಪುರ ಟೆಸ್ಟ್ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆಗ ಅವರಿಗೆ 21 ವರ್ಷ. ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಚೊಚ್ಚಲ ಪಂದ್ಯವನ್ನು ಸ್ಮರಣೀಯಗೊಳಿಸಿದ್ದರು. ಇಂಗ್ಲೆಂಡ್ ತಂಡದ ನಾಯಕನಾಗಿಯೂ ಕುಕ್ ತಂಡಕ್ಕೆ ಹಲವು ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ಇಂಗ್ಲೆಂಡ್ ಪರ ಅತ್ಯಧಿಕ ಟೆಸ್ಟ್ ಶತಕ ಬಾರಿಸಿದ 2ನೇ ಆಟಗಾರ ಎಂಬ ಹಿರಿಮೆಯೂ ಕುಕ್ ಹೆಸರಿನಲ್ಲಿದೆ. ಒಟ್ಟು 33 ಟೆಸ್ಟ್ ಶತಕ ಬಾರಿಸಿದ್ದಾರೆ.
ನೀತು ಡೇವಿಡ್
90ರ ದಶಕದಲ್ಲಿ ಭಾರತ ಮಹಿಳಾ ತಂಡದ ಸ್ಪಿನ್ನರ್ ಆಗಿದ್ದ ನೀತು ಡೇವಿಡ್(Neetu David) 1995 ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಡಯಾನಾ ಎಡುಲ್ಜಿ ಅವರ ನಿವೃತ್ತಿಯ ನಂತರ ಭಾರತದ ಮುಂಚೂಣಿಯ ಎಡಗೈ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದರು. ಒಟ್ಟು ಭಾರತ ಪರ 10 ಟೆಸ್ಟ್ ಪಂದ್ಯಗಳಿಂದ 41 ವಿಕೆಟ್, 97 ಏಕದಿನ ಪಂದ್ಯಗಳಿಂದ 141 ವಿಕೆಟ್ ಕೆಡವಿದ್ದಾರೆ. ಭಾರತ ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 100 ವಿಕೆಟ್ ಪೂರ್ತಿಗೊಳಿಸಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಯೂ ಇವರ ಹೆಸರಿನಲ್ಲಿದೆ. 2005ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸುವಲ್ಲಿ ನೀತು ಡೇವಿಡ್ ಪ್ರಮುಖ ಪಾತ್ರವಹಿಸಿದ್ದರು. ಟೂರ್ನಿಯಲ್ಲಿ ಅವರು ಒಟ್ಟು 20 ವಿಕೆಟ್ ಕಿತ್ತು ಗರಿಷ್ಠ ವಿಕೆಟ್ ಟೇಕರ್ ಎನಿಸಿದ್ದರು. ಫೈನಲ್‌ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋತು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
ಇದನ್ನೂ ಓದಿ IND vs NZ: ಮಳೆಗೆ ಕೊಚ್ಚಿ ಹೋದ ಮೊದಲ ದಿನದಾಟ
ಎಬಿಡಿ ವಿಲಿಯರ್ಸ್
ದಕ್ಷಿಣ ಆಫ್ರಿಕಾದ ಸವ್ಯಸಾಚಿ ಕ್ರಿಕೆಟಿಗ ಎಬಿಡಿ ವಿಲಿಯರ್ಸ್(AB de Villiers ) ಅಂತಾರಾಷ್ಟ್ರೀಯ ಮಟ್ಟದಲ್ಲಿ 114 ಟೆಸ್ಟ್, 228 ಏಕದಿನ ಹಾಗೂ 78 ಟಿ–20 ಪಂದ್ಯಗಳನ್ನು ಆಡಿ ವೃತ್ತಿ ಜೀವನದ ಶ್ರೇಷ್ಠ ಆಟಗಾರನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಟೆಸ್ಟ್‌ನಲ್ಲಿ 8,765 ರನ್, 222 ಕ್ಯಾಚ್ ಮತ್ತು 5 ಸ್ಟಂಪಿಂಗ್ ಮಾಡಿದ್ದಾರೆ. ಏಕದಿನದಲ್ಲಿ 9,577 ರನ್, 176 ಕ್ಯಾಚ್ ಪಡೆದಿದ್ದಾರೆ. ಟಿ20 ಯಲ್ಲಿ 1,672 ರನ್, 65 ಕ್ಯಾಚ್ ಹಿಡಿದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಬಾರಿಸಿದ ವಿಶ್ವ ದಾಖಲೆ ವಿಲಿಯರ್ಸ್ ಹೆಸರಿನಲ್ಲಿದೆ. 2015 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೇವಲ 31 ಎಸೆತದಲ್ಲಿ ಶತಕ ಬಾರಿಸಿದ್ದರು.