Thursday, 19th December 2024

ICC Test Rankings: ಮತ್ತೆ ನಂ.1 ಸ್ಥಾನಕ್ಕೇರಿದ ಜೋ ರೂಟ್‌

ದುಬೈ: ಐಸಿಸಿ ನೂತನ ಟೆಸ್ಟ್‌ ಬ್ಯಾಟಿಂಗ್‌(ICC Test Rankings) ಶ್ರೇಯಾಂಕದಲ್ಲಿ ಇಂಗ್ಲೆಂಡ್‌ ತಂಡದ ಅನುಭವಿ ಬ್ಯಾಟರ್‌ ಜೋ ರೂಟ್‌ ಮತ್ತೆ ಅಗ್ರಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ. ತನ್ನದೇ ದೇಶದ ಹ್ಯಾರಿ ಬ್ರೂಕ್‌ ಅವರನ್ನು ಹಿಂದಿಕ್ಕಿ ರೂಟ್‌ ಈ ಸಾಧನೆಗೈದಿದ್ದಾರೆ.

ಕಳೆದ ವಾರ ಮೊದಲ ಸ್ಥಾನಕ್ಕೇರಿದ್ದ ಬ್ರೂಕ್‌ ನ್ಯೂಜಿಲ್ಯಾಂಡ್‌ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ ಸೇರಿ ಕೇವಲ ಒಂದು ರನ್‌ಗೆ ಸೀಮಿತರಾಗಿದ್ದರು. ರೂಟ್‌  32 ಮತ್ತು 54 ರನ್‌ ಬಾರಿಸಿದ್ದರು. ಹೀಗಾಗಿ ರೂಟ್‌ ಶ್ರೇಯಾಂಕದಲ್ಲಿ ಏರಿಕೆ ಕಂಡು ಮೊದಲ ಸ್ಥಾನಕ್ಕೆ ಜಿಗಿದರು. ಸದ್ಯ ರೂಟ್‌ (895) ಮತ್ತು ಬ್ರೂಕ್‌(876) ಮಧ್ಯೆ 19 ಅಂಕದ ಅಂತರವಿದೆ.

ಆಸೀಸ್‌ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿಯೂ ವಿಫಲವಾದ ಟೀಮ್‌ ಇಂಡಿಯಾದ ಎಡಗೈ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್(811) 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ವಿಕೆಟ್‌ ಕೀಪರ್‌ ಕಮ್‌ ಬ್ಯಾಟರ್‌ ರಿಷಭ್‌ ಪಂತ್‌(724) 9ನೇ ಸ್ಥಾನದಲ್ಲಿದ್ದಾರೆ. ಉಭಯ ಆಟಗಾರರನ್ನು ಹೊರತುಪಡಿಸಿ ಉಳಿದ ಯಾವುದೇ ಟೀಮ್‌ ಇಂಡಿಯಾ ಬ್ಯಾಟರ್‌ ಕೂಡ ಟಾಪ್‌-10ನಲ್ಲಿ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ 2024ರಲ್ಲಿ ವಿದಾಯ ಹೇಳಿದ ಕ್ರಿಕೆಟಿಗರ ಪಟ್ಟಿ ಹೀಗಿದೆ

ತವರಿನ ಇಂಗ್ಲೆಂಡ್‌ ವಿರುದ್ಧದ ಅಂತಿಮ ಪಂದ್ಯದಲ್ಲಿ ಅಮೋಘ ಶತಕ ಬಾರಿಸಿದ ನ್ಯೂಜಿಲ್ಯಾಂಡ್‌ನ ಹಿರಿಯ ಬ್ಯಾಟರ್‌ ಕೇನ್‌ ವಿಲಿಯಮ್ಸನ್‌(867) ಮೂರನೇ ಸ್ಥಾನಕ್ಕೇರಿದ್ದಾರೆ. ವಿರಾಟ್‌ ಕೊಹ್ಲಿ(661), ರೋಹಿತ್‌ ಶರ್ಮ(595) ಕ್ರಮವಾಗಿ 20 ಮತ್ತು 30ನೇ ಸ್ಥಾನದಲ್ಲಿದ್ದಾರೆ.

ಬೌಲಿಂಗ್‌ ಶ್ರೇಯಾಂಕದ ಟಾಪ್‌ 5 ಸ್ಥಾನದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಟೀಮ್‌ ಇಂಡಿಯಾದ ವೇಗಿ ಜಸ್‌ಪ್ರೀತ್‌ ಬುಮ್ರಾ(890) ಅಗ್ರಸ್ಥಾನದಲ್ಲೇ ಮುಂದುವರಿದರೆ, ಕಗಿಸೊ ರಬಾಡ(856), ಆಸೀಸ್‌ನ ಜೋಶ್‌ ಹ್ಯಾಜಲ್‌ವುಡ್‌(851) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬುಧವಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಆರ್‌.ಅಶ್ವಿನ್‌(797) 5ನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಯಾದಿಯಲ್ಲಿ ಜಸ್‌ಪ್ರೀತ್‌ ಬುಮ್ರಾ(415) ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಆಸೀಸ್‌ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಅರ್ಧಶತಕ ಬಾರಿಸಿದ್ದರು. ಆದರೆ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದರು.

ಟಾಪ್‌-5 ಬ್ಯಾಟರ್‌

ಜೋ ರೂಟ್‌-895 ಅಂಕ

ಹ್ಯಾರಿ ಬ್ರೂಕ್‌-876 ಅಂಕ

ಕೇನ್‌ ವಿಲಿಯಮ್ಸನ್‌-867 ಅಂಕ

ಯಶಸ್ವಿ ಜೈಸ್ವಾಲ್‌-811 ಅಂಕ

ಟ್ರಾವಿಸ್‌ ಹೆಡ್-781‌ ಅಂಕ

ಟಾಪ್‌-ಬೌಲರ್ಸ್‌

ಜಸ್‌ಪ್ರೀತ್‌ ಬುಮ್ರಾ-890 ಅಂಕ

ಕಗಿಸೊ ರಬಾಡ-856 ಅಂಕ

ಜೋಶ್‌ ಹ್ಯಾಜಲ್‌ವುಡ್‌-851 ಅಂಕ

ಪ್ಯಾಟ್‌ ಕಮಿನ್ಸ್‌-816 ಅಂಕ

ಆರ್‌.ಅಶ್ವಿನ್‌-797 ಅಂಕ