Monday, 25th November 2024

IND A vs AUS A: ಆಸೀಸ್‌ ‘ಎ’ ವಿರುದ್ಧವೂ ಭಾರತಕ್ಕೆ ವೈಟ್‌ವಾಶ್‌ ಮುಖಭಂಗ

ಮೆಲ್ಬರ್ನ್: ಆಸ್ಟ್ರೇಲಿಯ ‘ಎ’ ವಿರುದ್ಧದ 2ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ ʼಎʼ(IND A vs AUS A) ತಂಡ 6 ವಿಕೆಟ್‌ಗಳ ಸೋಲು ಕಂಡಿದೆ. ಇದರೊಂದಿಗೆ ಆಸೀಸ್‌ನಲ್ಲಿಯೂ ಭಾರತ ತಂಡ ಎರಡು ಪಂದ್ಯಗಳ ಸರಣಿಯಲ್ಲಿ 0-2 ವೈಟ್‌ವಾಶ್‌ ಮುಖಭಂಗ ಕಂಡಿತು. ಮೊದಲ ಟೆಸ್ಟ್‌ನಲ್ಲಿ 7 ವಿಕೆಟ್‌ಗಳ ಸೋಲು ಕಂಡಿತ್ತು.

2ನೇ ದಿನದಂತ್ಯಕ್ಕೆ 5 ವಿಕೆಟ್‌ ನಷ್ಟದಲ್ಲಿ 73 ರನ್‌ ಗಳಿಸಿ 11 ರನ್‌ ಮುನ್ನಡೆ ಪಡೆದಿದ್ಧ ಭಾರತ ಮೂರನೇ ದಿನದಾಟದಲ್ಲಿ 229 ರನ್‌ ಬಾರಿಸಿ ಆಲೌಟ್‌ ಆಯಿತು. ಗೆಲುವಿಗೆ 168 ರನ್‌ ಗುರಿ ಪಡೆದ ಆಸ್ಟ್ರೇಲಿಯಾ 4 ವಿಕೆಟ್‌ಗೆ 169 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು. ಸ್ಯಾಮ್ ಕಾನ್‌ಸ್ಟಾಸ್ (73) ಮತ್ತು ಬ್ಯೂ ವೆಬ್‌ಸ್ಟರ್(46) ಜೋಡಿಯ ಅಜೇಯ ಆಟ ಆಸೀಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

19 ರನ್‌ ಗಳಿಸಿದ್ದಲ್ಲಿಂದ ಆಟ ಮುಂದುವರಿಸಿದ ಧ್ರುವ್ ಜುರೆಲ್‌ 68 ರನ್‌ ಬಾರಿಸಿ ದ್ವಿತೀಯ ಇನಿಂಗ್ಸ್‌ನಲ್ಲಿಯೂ ತಂಡಕ್ಕೆ ಆಸರೆಯಾದರು. ಮೊದಲ ಇನಿಂಗ್ಸ್‌ನಲ್ಲಿಯೂ ಅವರು ಅರ್ಧಶತಕ ಬಾರಿಸಿದ್ದರು. 9 ರನ್‌ ಗಳಿಸಿದ್ದ ನಿತೀಶ್‌ ರೆಡ್ಡಿ 38 ರನ್‌ ಗಳಿಸಿದರು. ಅಂತಿಮ ಹಂತದಲ್ಲಿ ಕನ್ನಡಿಗ, ವೇಗಿ ಪ್ರಸಿದ್ಧ್‌ ಕೃಷ್ಣ(29) ಮತ್ತು ತನುಷ್ ಕೋಟ್ಯಾನ್(44) ರನ್‌ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಇದನ್ನೂ ಓದಿ IND vs SA 1st T20I: ಗೆಲುವಿನಲ್ಲೂ ದಾಖಲೆ ಬರೆದ ಭಾರತ

ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ಕೇವಲ 1ರನ್‌ಗೆ 2 ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾದರೂ ಸ್ಯಾಮ್ ಕಾನ್‌ಸ್ಟಾಸ್ ಅರ್ಧಶತಕ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಆಸೀಸ್‌ ಪರ ಇಬ್ಬರು ಬ್ಯಾಟರ್‌ಗಳು ಶೂನ್ಯ ಸುತ್ತಿದರು. ದ್ವಿತೀಯ ಇನಿಂಗ್ಸ್‌ನಲ್ಲಿ ಪ್ರಸಿದ್ಧ್‌ ಕೃಷ್ಣ(2), ಮುಕೇಶ್‌ ಕುಮಾರ್‌ ಮತ್ತು ತನುಷ್ ಕೋಟ್ಯಾನ್ ತಲಾ ಒಂದೊಂದು ವಿಕೆಟ್‌ ಕಿತ್ತರು.

ಗುರುವಾರ ಆರಂಭಗೊಂಡಿದ್ದ ಈ ಟೆಸ್ಟ್‌ ಪಂದ್ಯ ಕೇವಲ ಮೂರೇ ದಿನಕ್ಕೆ ಅಂತ್ಯ ಕಂಡಿತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 161 ರನ್‌ ಬಾರಿಸಿದರೆ, ಇದಕ್ಕೆ ಉತ್ತರವಾಗಿ ಆಸೀಸ್‌ ‘ಎ’ ತಂಡ ಶುಕ್ರವಾರ 223 ರನ್‌ಗೆ ಆಲೌಟಾಯಿತು. ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ದಾಳಿ ಸಂಘಟಿಸಿದ ಪ್ರಸಿದ್ಧ್‌ ಕೃಷ್ಣ 4, ಮುಕೇಶ್‌ ಕುಮಾರ್‌ 3, ಖಲೀಲ್‌ ಅಹ್ಮದ್‌ 2 ವಿಕೆಟ್‌ ಕೆಡವಿದ್ದರು.