Thursday, 21st November 2024

IND vs AUS: ವಿರಾಟ್‌ ಕೊಹ್ಲಿ ಕೊಟ್ಟಿದ್ದ ಸಲಹೆಯನ್ನು ರಿವೀಲ್‌ ಮಾಡಿದ ಯಶಸ್ವಿ ಜೈಸ್ವಾಲ್‌!

Yashasvi Jaiswal reveals Virat Kohli's message to him ahead of BGT series

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ ಅವರು ಮಾಜಿ ನಾಯಕ ವಿರಾಟ್‌ ಕೊಹ್ಲಿ ನೀಡಿದ್ದ ಮಹತ್ವದ ಸಲಹೆಯನ್ನು ಬಹಿರಂಗಪಡಿಸಿದ್ದಾರೆ. ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಯಶಸ್ವಿಯಾಗಬೇಕೆಂದರೆ ಶಿಸ್ತುಬದ್ದವಾಗಿ ಕಾರ್ಯಪ್ರಕ್ರಿಯೆಗಳನ್ನು ಅನುಸರಿಸಬೇಕೆಂದೆ ಕೊಹ್ಲಿ ಕೊಟ್ಟಿದ್ದ ಸಲಹೆಯನ್ನು ಯುವ ಬ್ಯಾಟ್ಸ್‌ಮನ್‌ ಬಹಿರಂಗಪಡಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಶುಕ್ರವಾರ (ನವೆಂಬರ್‌ 22) ಪರ್ತ್‌ನ ಆಫ್ಟಸ್‌ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಅಂದ ಹಾಗೆ ಬಿಸಿಸಿಐ ಶೇರ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಯಶಸ್ವಿ ಜೈಸ್ವಾಲ್‌, ಆಸ್ಟ್ರೇಲಿಯಾ ಎದುರಿನ ಟೆಸ್ಟ್‌ ಸರಣಿಯ ಆರಂಭಕ್ಕೂ ಮುನ್ನ ವಿರಾಟ್‌ ಕೊಹ್ಲಿ ನೀಡಿದ್ದ ಸಲಹೆಗಳನ್ನು ರಿವೀಲ್‌ ಮಾಡಿದ್ದಾರೆ ಹಾಗೂ ಇದರಿಂದ ತುಂಬಾ ಉಪಯೋಗವಾಗುತ್ತಿದೆ ಎಂಬ ಅಂಶವನ್ನು ರಿವೀಲ್‌ ಮಾಡಿದ್ದಾರೆ.

Yashasvi Jaiswal: ವಿಶ್ವ ದಾಖಲೆ ಸನಿಹ ಯಶಸ್ವಿ ಜೈಸ್ವಾಲ್

“ನಾನು ಹಿರಿಯ ಕ್ರಿಕೆಟಿಗರ ಜೊತೆ ಆಡಲು ಆರಂಭಿಸಿದ ಬಳಿಕ ನಾನು ವಿರಾಟ್‌ ಕೊಹ್ಲಿ ಬಳಿ ಸಾಕಷ್ಟು ಮಾತನಾಡಿದ್ದೆ. ಅವರು ತಮ್ಮನ್ನು ಹೇಗೆ ಪ್ರತಿದಿನ ನಿರ್ವಹಿಸುತ್ತಾರೆಂಬ ಅಂಶಗಳನ್ನು ತಿಳಿದುಕೊಂಡಿದ್ದೆ. ನಾನು ಎಲ್ಲಾ ಸ್ವರೂಪದ ಕ್ರಿಕೆಟ್‌ ಆಡಬೇಕೆಂದರೆ ದಿನನಿತ್ಯದ ಚಟುವಟಿಕೆಗಳು ಹಾಗೂ ಕಾರ್ಯಪ್ರವೃತ್ತಿ ಶಿಸ್ತಿನಿಂದ ಕೂಡಿರಬೇಕೆಂದು ನನಗೆ ಅವರು ತಿಳಿಸಿದ್ದರು. ನಾನು ಅವರನ್ನು ಪ್ರತಿನಿತ್ಯ ನೋಡುತ್ತಿದ್ದೆ ಹಾಗೂ ಅವರಿಂದ ಪ್ರೇರಿತನಾಗುತ್ತಿದ್ದೇನೆ. ಆ ಮೂಲಕ ನನ್ನ ದಿನನಿತ್ಯದ ಚಟುವಟಿಕೆಗಳು ಹಾಗೂ ಆಹಾರದ ಪ್ರವೃತ್ತಿಯಲ್ಲಿ ಬದಲಾವಣೆಯಾಯಿತು. ಇದು ನನ್ನ ಪಾಲಿಗೆ ತುಂಬಾ ಮುಖ್ಯವಾಯಿತು. ಇದರಿಂದ ನಾನು ದಿನದಿಂದ ದಿನಕ್ಕೆ ಬದಲಾಗುತ್ತಿದ್ದೇನೆಂದು ಅನಿಸುತ್ತಿದೆ,” ಎಂದು ಬಿಸಿಸಿಐ ಶೇರ್‌ ಮಾಡಿರುವ ವಿಡಿಯೊದಲ್ಲಿ ಯಶಸ್ವಿ ಜೈಸ್ವಾಲ್‌ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಸವಾಲಿಗೆ ಯಶಸ್ವಿ ಜೈಸ್ವಾಲ್‌ ಸಿದ್ದ

“ಆಸ್ಟ್ರೇಲಿಯಾ ಪ್ರವಾಸ ನನ್ನ ಪಾಲಿಗೆ ಇದು ಮೊದಲು. ಇಲ್ಲಿ ಆಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಆಸ್ಟ್ರೇಲಿಯಾದಲ್ಲಿ ನಾನು ತುಂಬಾ ಚೆನ್ನಾಗಿ ಆಡಬೇಕೆಂದು ಅಂದುಕೊಂಡಿದ್ದೇನೆ. ಇಲ್ಲಿನ ಸಂಗತಿಗಳು ವಿಭಿನ್ನವಾಗಿವೆ. ಚೆಂಡು ಹಾಗೂ ಪಿಚ್‌ಗಳು ಕೂಡ ವಿಭಿನ್ನವಾಗಿವೆ. ಇದರ ಬಗ್ಗೆ ನಮಗೆ ತಿಳಿದಿದೆ. ಇಲ್ಲಿನ ಸವಾಲನ್ನು ಎದುರಿಸಲು ನಾವು ಮಾನಸಿಕವಾಗಿ ಸಿದ್ದರಾಗಿದ್ದೇವೆಂದು ನಾನು ಭಾವಿಸುತ್ತೇನೆ,” ಎಂದು ಯಶಸ್ವಿ ಜೈಸ್ವಾಲ್‌ ತಿಳಿಸಿದ್ದಾರೆ.

IND vs AUS: ವಿರಾಟ್‌ ಕೊಹ್ಲಿ ಅಲ್ಲ, ಭಾರತಕ್ಕೆ ಯಶಸ್ವಿ ಜೈಸ್ವಾಲ್‌ ಎಕ್ಸ್‌ ಫ್ಯಾಕ್ಟರ್‌ ಎಂದ ರವಿಶಾಸ್ತ್ರಿ!

“ನಾನು ಇಲ್ಲಿರಬೇಕು ಹಾಗೂ ನಾನು ಹೋಗಿ ಆಡಬೇಕು. ಇಲ್ಲಿನ ಕಂಡೀಷನ್ಸ್‌ ಹೇಗಿದೆ ಎಂದು ನಾನು ನೋಡಬೇಕು. ಏಕೆಂದರೆ ಜನರು ಸಾಕಷ್ಟು ಈ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ನಾನು ಮೈದಾನಕ್ಕೆ ಹೋಗಿ ಆಡಬೇಕಾಗಿದೆ ಹಾಗೂ ನಗು ಮುಖದೊಂದಿಗೆ ಇಲ್ಲಿನ ಕ್ಷಣಗಳನ್ನು ಆನಂದಿಸಬೇಕಾಗಿದೆ. ನೀವು ಅಲ್ಲಿ ಇಲ್ಲವಾದಲ್ಲಿ ಸಾಕಷ್ಟು ಯೋಚನೆಗಳು ಬರುತ್ತವೆ ಹಾಗೂ ಇಲ್ಲಿನ ಕಂಡೀಷನ್ಸ್‌ ಹೇಗಿದೆ ಎಂಬ ಬಗ್ಗೆ ಯೋಚನೆಗಳು ಮೂಡುತ್ತವೆ. ಇದೇ ಹಾದಿಯಲ್ಲಿ ನಾನು ಸಂಗತಿಗಳನ್ನು ನೋಡುತ್ತೇನೆ. ಆಸೀಸ್‌ ಪಿಚ್‌ಗಳಲ್ಲಿ ಆಡಲು ನನಗೆ ಅತ್ಯುತ್ತಮ ಅವಕಾಶ ಲಭಿಸಿದೆ,” ಎಂದು ಆರಂಭಿಕ ಬ್ಯಾಟ್ಸ್‌ಮನ್‌ ಹೇಳಿದ್ದಾರೆ.

“ಇಲ್ಲಿ ಚೆನ್ನಾಗಿ ನಿದ್ರೆ ಮಾಡಲು ಕೂಡ ಪ್ರಯತ್ನಿಸುತ್ತಿದ್ದೇನೆ ಹಾಗೂಅಭ್ಯಾಸಕ್ಕೂ ಮುನ್ನ ಚೆನ್ನಾಗಿ ತಿನ್ನುತ್ತೇನೆ ಹಾಗೂ ಚೇತರಿಸಿಕೊಳ್ಳುವ ಕಡೆ ಗಮನವನ್ನು ಕೊಡುತ್ತೇನೆ. ಅಲ್ಲದೆ ಅಭ್ಯಾಸದ ಸೆಷನ್‌ಗಳಿಗೆ ತಾಜಾತನದಿಂದ ಇರಲು ಪ್ರಯತ್ನಿಸುತ್ತೇನೆ,” ಎಂದು ಎಡಗೈ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ.