Friday, 15th November 2024

IND vs AUS: ʻತಂಡ ನನಗೆ ಮೊದಲುʼ-ಟೀಕಾಕಾರರಿಗೆ ಕೆಎಲ್‌ ರಾಹುಲ್‌ ತಿರುಗೇಟು!

KL Rahul reveals his mantra ahead of Border-Gavaskar Trophy

ನವದೆಹಲಿ: ಕಳೆದ ಏಕದಿನ ವಿಶ್ವಕಪ್‌ ಟೂರ್ನಿಯಿಂದ ಇಲ್ಲಿಯವರೆಗೂ ಕಳಪೆ ಫಾರ್ಮ್‌ನಿಂದಾಗಿ ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದರು. ಇದೀಗ ಅವರು ಆಸ್ಟ್ರೇಲಿಯಾ ವಿರುದ್ದದ ಐದು ಪಂದ್ಯಗಳ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ (IND vs AUS) ನಿಮಿತ್ತ ಸಜ್ಜಾಗುತ್ತಿರುವ ಕನ್ನಡಿಗ ಕೆಎಲ್‌ ರಾಹುಲ್‌, ತಮ್ಮ ಬ್ಯಾಟಿಂಗ್‌ ಮಂತ್ರವನ್ನು ಬಹಿರಂಗಪಡಿಸಿದ್ದಾರೆ ಹಾಗೂ ತಂಡ ನನಗೆ ಮುಖ್ಯ, ಅದಕ್ಕಾಗಿ ನಾನು ಯಾವುದೇ ಶೈಲಿಯ ಆಟವನ್ನು ಆಡಿದರೂ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇತ್ತೀಚಿನ ಪಂದ್ಯಗಳಲ್ಲಿ ಕೆಎಲ್‌ ರಾಹುಲ್‌ ಸತತ ಬ್ಯಾಟಿಂಗ್‌ ವೈಫಲ್ಯದಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದಾರೆ ಹಾಗೂ ತಂಡದಲ್ಲಿನ ತಮ್ಮ ಸ್ಥಾನದ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳಿಗೆ ಗುರಿಯಾಗಿದ್ದಾರೆ. ಆದರೂ ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ಕನ್ನಡಿಗನನ್ನು ಬೆಂಬಲಿಸುತ್ತಿದೆ. ಸ್ಟಾರ್‌ ಸ್ಪೋರ್ಟ್ಸ್‌ ಸಂದರ್ಶನದಲ್ಲಿ ಮಾತನಾಡಿದ್ದ ಕೆಎಲ್‌ ರಾಹುಲ್‌, ತಂಡದ ಅಗತ್ಯಕ್ಕೆ ತಕ್ಕಂತೆ ಪ್ರೇರಣೆ ಹಾಗೂ ಪ್ರಕ್ರಿಯೆಯ ಬಗ್ಗೆ ಯೋಚಿಸುತ್ತೇನೆ ಎಂದು ತಿಳಿಸಿದ್ದಾರೆ.

IND vs AUS: ಆಸ್ಟ್ರೇಲಿಯಾ ಟೆಸ್ಟ್‌ ಸರಣಿಗೆ ಭಾರತ ಕಳೆದುಕೊಳ್ಳಲಿರುವ ಮೂವರು ಸ್ಟಾರ್‌ಗಳು!

“ಎಲ್ಲಾ ಆಟಗಾರರು ಕೂಡ ಮುಕ್ತವಾಗಿ ಆಡಲು ಬಯಸುತ್ತಾರೆ ಹಾಗೂ ನಾನು ಆಡುತ್ತಿರುವ ಹಾದಿಯ ಬಗ್ಗೆ ಮತ್ತು ನಾನು ನನ್ನ ಆಟವನ್ನು ಆನಂದಿಸುತ್ತಿದ್ದೇನೆಂದು ಪ್ರತಿಯೊಬ್ಬರೂ ಭಾವಿಸಿದ್ದಾರೆ. ಆದರೆ, ನನ್ನ ಆಲೋಚನಾ ಪ್ರಕ್ರಿಯೆ ಹಾಗೂ ಪ್ರೇರಣೆ ಯಾವಾಗಲೂ ತಂಡವೇ ಮೊದಲಾಗಿರುತ್ತದೆ. ನನ್ನ ಸ್ವಾಭವಿಕ ಆಟ ಯಾವುದು ಅಥವಾ ನಾನು ಏನು ಮಾಡಬೇಕು ಎಂಬುದು ಇಲ್ಲಿ ಮುಖ್ಯವಾಗುವುದಿಲ್ಲ. ನಾವು ತಂಡದ ಕ್ರಿಡೆಯನ್ನು ಆಡುತ್ತಿದ್ದೇವೆ. ಒಂದು ವೇಳೆ ನಾನು ಟೆನಿಸ್‌ ಆಡುತ್ತಿದ್ದರೆ, ಇದು ಸಂಪೂರ್ಣ ವಿಭಿನ್ನವಾಗಿರುತ್ತದೆ; ಇದು ನನ್ನ ಸ್ವಾಭವಿಕ ಆಟ ಎಂದು ಇಲ್ಲಿ ಹೇಳಬಹುದು. ಆದರೆ, ತಂಡದ ಕ್ರೀಡೆಯಲ್ಲಿ ತುಂಬಾ ವಿಭಿನ್ನವಾಗಿರುತ್ತದೆ. ಪ್ರತಿಯೊಂದು ಪಂದ್ಯದಲ್ಲಿಯೂ ತಂಡದ ಅಗತ್ಯಕ್ಕೆ ತಕ್ಕಂತೆ ಪಾತ್ರ ಹಾಗೂ ಜವಾಬ್ದಾರಿಗಳು ವಿಭಿನ್ನವಾಗಿರುತ್ತವೆ,” ಎಂದು ಕೆಎಲ್‌ ರಾಹುಲ್‌ ಹೇಳಿದ್ದಾರೆ.

ಭಾರತ ಟಿ20 ತಂಡಕ್ಕೆ ಕಮ್‌ಬ್ಯಾಕ್‌ ಮಾಡುವುದು ಗುರಿ

ಭಾರತ ಟಿ20ಐ ತಂಡಕ್ಕೆ ಮರಳಿ ಎಲ್ಲಾ ಸ್ವರೂಪದಲ್ಲಿಯೂ ಆಡುವುದು ನನ್ನ ಮುಖ್ಯ ಗುರಿಯಾಗಿದೆ ಹಾಗೂ ಎಲ್ಲಾ ಸ್ವರೂಪದ ಆಟಗಾರನಾಗಬೇಕೆಂಬುದು ನನ್ನ ಬಯಕೆ. ಭಾರತ ಟಿ20ಐ ತಂಡಕ್ಕೆ ಮರಳುವ ಸಲುವಾಗಿ ಮುಂಬರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಪ್ರಮುಖ ವೇದಿಕೆಯನ್ನಾಗಿ ಬಳಿಸಿಕೊಳ್ಳಲಾಗುವುದು ಎಂದು ಕೆಎಲ್‌ ರಾಹುಲ್‌ ತಿಳಿಸಿದ್ದಾರೆ.

Border Gavaskar Trophy: ಭಾರತ ‘ಎ’ ತಂಡಕ್ಕೆ ಕೆ.ಎಲ್‌ ರಾಹುಲ್‌ ಸೇರ್ಪಡೆ

“ಭಾರತ ಟಿ20 ತಂಡಕ್ಕೆ ಮರಳುವುದು ನನ್ನ ಮುಖ್ಯ ಗುರಿ. ನಾನು ಎಲ್ಲಾ ಸ್ವರೂಪದ ಆಟಗಾರ ಆಗುವುದು ನನ್ನ ಮುಖ್ಯ ಉದ್ದೇಶ ಹಾಗೂ ಇದು ಕಳೆದ ಹಲವು ವರ್ಷಗಳಿಂದ ಎಂದಿಗೂ ಬದಲಾಗುವುದಿಲ್ಲ. ಅದರಂತೆ ಭಾರತ ತಂಡದ ಪರ ಎಲ್ಲಾ ಸ್ವರೂಪದಲ್ಲಿಯೂ ಆಡಬೇಕು ಹಾಗೂ ಈ ಹಿಂದೆಯೂ ಈ ಕೆಲಸವನ್ನು ಮಾಡಿದ್ದೇನೆ. ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡು ತುಂಬಾ ದಿನಗಳು ಕಳೆದಿವೆ ಹಾಗೂ ಇಲ್ಲಿಗೆ ಮರಳಲು ಏನು ಮಾಡಬೇಕೆಂದು ನನಗೆ ತಿಳಿದಿದೆ. ಮುಂದಿನ ಐಪಿಎಲ್‌ ಟೂರ್ನಿಯಲ್ಲಿ ನನ್ನ ಆಟವನ್ನು ಆನಂದಿಸಿ ಹೆಚ್ಚಿನ ರನ್‌ಗಳನ್ನು ಹೊಡೆಯಲು ಪ್ರಯತ್ನಿಸುತ್ತೇನೆ,” ಎಂದು ಕೆಎಲ್‌ ರಾಹುಲ್‌ ತಿಳಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಪರ್ತ್‌ನಲ್ಲಿ ನವೆಂಬರ್‌ 22 ರಂದು ಆರಂಭವಾಗಲಿದೆ. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕೆಎಲ್‌ ರಾಹುಲ್‌ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸುವ ಸಾಧ್ಯತೆ ಇದೆ.