Wednesday, 20th November 2024

IND vs AUS: ಪರ್ತ್‌ ಟೆಸ್ಟ್‌ಗೂ ಮುನ್ನ ಅಭಿಮಾನಿಗಳಿಗೆ ಶಾಕ್‌ ನೀಡಿದ ವಿರಾಟ್‌ ಕೊಹ್ಲಿ!

Ahead of Australia Tests, Virat Kohli's lengthy social media post leaves fans puzzled

ಪರ್ತ್‌: ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ (IND vs AUS)ಸರಣಿಗೂ ಮುನ್ನ ಭಾರತ ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಗೊಂದಲಮಯ ಸಂದೇಶವನ್ನು ಬರೆಯುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಟೀಮ್‌ ಇಂಡಿಯಾದ ಹೊಸ ಉಡುಪಿನ ಬ್ರ್ಯಾಂಡ್‌ನೊಂದಿಗೆ ಸುದೀರ್ಘ ಪ್ರಯಾಣದ ಬಗ್ಗೆ ವಿರಾಟ್‌ ಕೊಹ್ಲಿ ಬರೆದು ಸಾಲುಗಳು ಅಭಿಮಾನಿಗಳಿಗೆ ತಲೆ ಕೆಡಿಸಿದೆ.

ವಿರಾಟ್‌ ಕೊಹ್ಲಿಯ ಪೋಸ್ಟ್‌ ಅನ್ನು ನೋಡಿದ ಕೆಲ ಅಭಿಮಾನಿಗಳು ಆರಂಭದಲ್ಲಿ ನಿವೃತ್ತಿ ಬಗ್ಗೆ ಪ್ರಸ್ತಾಪಿಸರಬಹುದೆಂದು ಭಾವಿಸಿದ್ದರೆ, ಇನ್ನು ಕೆಲವರು ಈ ಹಿಂದೆ 2022ರಲ್ಲಿಯೂ ತಮ್ಮ ಸುದೀರ್ಘ ವೃತ್ತಿ ಜೀವನದ ಬಗ್ಗೆ ಕೊಹ್ಲಿ ಇದೇ ರೀತಿಯಲ್ಲಿ ಭಾವನಾತ್ಮಕ ಸಂದೇಶವನ್ನು ಬರೆದಿದ್ದರು ಎಂದು ಹೇಳಿದ್ದಾರೆ. ಆದರೆ, ವಿರಾಟ್‌ ಕೊಹ್ಲಿ 2022ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಫಾರ್ಮ್‌ ಅನ್ನು ಕಂಡುಕೊಂಡಿದ್ದರು ಹಾಗೂ ಮುಂದುವರಿದಿದ್ದರು.

Virat Kohli: ಕೊಹ್ಲಿಯನ್ನು ಕೆಣಕಿದರೆ ಮಲಗಿದ ಸಿಂಹವನ್ನು ಎಚ್ಚರಿಸಿದಂತೆ; ವಾರ್ನರ್‌

ವಿರಾಟ್‌ ಕೊಹ್ಲಿಯ ಪೋಸ್ಟ್‌ನ ಸಾಲುಗಳು ಹೀಗಿವೆ

“ಈ ಹಿಂದೆ ನಮ್ಮನ್ನು ನೋಡಿದಾಗ ನಾವು ಸ್ವಲ್ಪ ವಿಭಿನ್ನವಾಗಿದ್ದೆವು. ಅವರು ಪ್ರಯತ್ನಿಸಿದ ಸ್ಥಳಕ್ಕೆ ನಾವು ತಲುಪಿರಲಿಲ್ಲ. ಎರಡು ಅನರ್ಹ ಸಂಗತಿಗಳು ಮಾತ್ರ ಕಾರ್ಯಗತವಾಗಿದ್ದವು. ನಾವು ಕಳೆದ ಹಲವು ವರ್ಷಗಳಿಂದ ಸಾಕಷ್ಟು ಬದಲಾಗಿದ್ದೇವೆ ಹಾಗೂ ನಮ್ಮ ಹಾದಿಯಲ್ಲಿ ನಾವು ಸಂಗತಿಗಳನ್ನು ಮುಗಿಸಿದ್ದೇವೆ. ಕೆಲವರು ನಮ್ಮನ್ನು ಹುಚ್ಚರು ಎಂದು ಕರೆದಿದ್ದರು ಹಾಗೂ ಇತರರ ಏನೂ ಹೇಳಿರಲಿಲ್ಲ. ಆದರೆ, ಪ್ರಾಮಾಣಿಕವಾಗಿ ನಾವು ಇದಕ್ಕೆ ತಲೆ ಕೆಡಿಸಿಕೊಂಡಿರಲಿಲ್ಲ. ನಾವು ಎಂಬುದನ್ನು ಸಾಬೀತುಪಡಿಸುವ ಪ್ರಕ್ರಿಯೆಯಲ್ಲಿ ಕಾರ್ಯನಿರತರಾಗಿದ್ದೇವೆ. ಹತ್ತು ವರ್ಷಗಳ ಏರಿಳಿತಗಳು ಮತ್ತು ಕೋವಿಡ್‌ ಕಠಿಣ ಸಮಯದಲ್ಲಿ ನಮ್ಮನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ಏನಾದರೂ ಇದ್ದರೆ, ಅದು ನಮಗೆ ನೆನಪಿಸುತ್ತದೆ -ವಿಭಿನ್ನವಾಗಿರುವುದು ನಮ್ಮ ಶಕ್ತಿ. 10 ವರ್ಷಗಳಿಂದ ನಮ್ಮ ಹಾದಿಯಲ್ಲಿ ಸಾಗುತಿದ್ದೇವೆ. ಮುಂದಿನ 10 ವರ್ಷಗಳು ನಮ್ಮ ಮುಂದಿವೆ,” ಎಂದು ವಿರಾಟ್‌ ಕೊಹ್ಲಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಫ್ಯಾನ್ಸ್‌ಗೆ ಗೊಂದಲ ಮೂಡಿಸಿದ ಕೊಹ್ಲಿಯ ಪೋಸ್ಟ್‌

ವಿರಾಟ್‌ ಕೊಹ್ಲಿ ಯಾವ ವಿಷಯಕ್ಕೆ ಸಂಬಂಧಿಸಿದಂತೆ ಈ ರೀತಿಯ ಪೋಸ್ಟ್‌ ಹಾಕಿದ್ದಾರೆಂದು ಅಭಿಮಾನಿಗಳಿಗೆ ಗೊಂದಲ ಉಂಟಾಗಿದೆ. ಇತ್ತೀಚೆಗೆ ಆಸ್ಟ್ರೇಲಿಯಾದ ಪತ್ರಿಕೆಯೊಂದು ವಿರಾಟ್‌ ಕೊಹ್ಲಿಯ ಫೋಟೋ ಸಹಿತ ಬ್ಯಾನರ್‌ವವೊಂದನ್ನು ಹಾಕಿತ್ತು. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಆದರೆ, ವಿರಾಟ್‌ ಕೊಹ್ಲಿ ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಹಾಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ಗೆ ಸರಣಿಗೆ ಸಜ್ಜಾಗುತ್ತಿದ್ದಾರೆ.

IND vs AUS: ʻಅತಿ ಹೆಚ್ಚು ರನ್‌ ಗಳಿಸುವುದು ಪಕ್ಕಾʼ-ವಿರಾಟ್‌ ಕೊಹ್ಲಿ ಬಗ್ಗೆ ಮೈಕಲ್‌ ಕ್ಲಾರ್ಕ್‌ ದೊಡ್ಡ ಭವಿಷ್ಯ!

ಆಸ್ಟ್ರೇಲಿಯಾದಲ್ಲಿ ಕೊಹ್ಲಿ ದಾಖಲೆಗಳು

ಪ್ರಸಕ್ತ ವರ್ಷದಲ್ಲಿ ವಿರಾಟ್‌ ಕೊಹ್ಲಿ ಕಳಪೆ ಫಾರ್ಮ್‌ನಲ್ಲಿದ್ದಾರೆ ಆದರೆ, ಅವರು ಆಸ್ಟ್ರೇಲಿಯಾದಲ್ಲಿ ಅತ್ಯುತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಅವರು ಆಡಿದ್ದ 13 ಟೆಸ್ಟ್‌ ಪಂದ್ಯಗಳನ್ನು ಆಡಿದ್ದ 54ರ ಸರಾಸರಿಯಲ್ಲಿ ಆರು ಶತಕಗಳೊಂದಿಗೆ 1353 ರನ್‌ಗಳನ್ನು ಕಲೆ ಹಾಕಿದ್ದರು. ಅದರಲ್ಲಿಯೂ ವಿಶೇಷವಾಗಿ ಪರ್ತ್‌ನ ಆಪ್ಟಸ್‌ ಸ್ಟೇಡಿಯಂನಲ್ಲಿ ವಿರಾಟ್‌ ಕೊಹ್ಲಿ ಶತಕವನ್ನು ಸಿಡಿಸಿದ್ದರು.