ಪರ್ತ್: ಶುಕ್ರವಾರ ಆರಂಭಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ(IND vs AUS) ಬಾರ್ಡರ್&ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನವೇ ವೇಗಿಗಳು ಬಿಗಿ ಹಿಡಿತ ಸಾಧಿಸಿದ್ದಾರೆ. ಹಸಿರು ಮತ್ತು ತೇವಾಂಶದಿಂದ ಒಳಗೊಂಡ ಬೌನ್ಸಿ ಪಿಚ್ನಲ್ಲಿ ಘಾತಕ ಸ್ಫೆಲ್ಗಳ ಮೂಲಕ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದರು. ಉಭಯ ತಂಡಗಳ ವೇಗಿಗಳು ಸೇರಿಕೊಂಡು ಒಟ್ಟು 17 ವಿಕೆಟ್ ಉಡಾಯಿಸಿದರು. ಸದ್ಯದ ಸ್ಥಿತಿ ನೋಡುವಾಗ ಈ ಪಂದ್ಯ ಕೇವಲ ಎರಡೇ ದಿನಕ್ಕೆ ಮುಕ್ತಾಯ ಕಾಣುವಂತೆ ಭಾಸವಾಗಿದೆ.
ಇಲ್ಲಿನ ಆಪ್ಟಸ್ ಸ್ಟೇಡಿಯಂನಲ್ಲಿ ಆರಂಭಗೊಂಡ ಈ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಹಲವು ಏರಿಳಿತ ಕಾಣುವ ಮೂಲಕ 49.4 ಓವರ್ಗಳಲ್ಲಿ 150 ರನ್ಗೆ ಸರ್ವಪತನ ಕಂಡಿತು. ಸಣ್ಣ ಮೊತ್ತವನ್ನು ಬೆನ್ನಟಿದ ಆಸ್ಟ್ರೇಲಿಯಾ ದೊಡ್ಡ ಮೊತ್ತವನ್ನು ಪೇರಿಸಿ ಭಾರತಕ್ಕೆ ಒತ್ತಡ ಹೇರಬಹುದೆಂದು ನಿರೀಕ್ಷೆ ಮಾಡಲಾಯಿತು. ಆದರೆ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ ದಾಳಿಯ ಹೊಡೆತ ತಿಂದ ಆಸೀಸ್ ಪಡೆ ಇನಿಂಗ್ಸ್ ಹಿನ್ನಡೆ ಭೀತಿಗೆ ಸಿಲುಕಿದೆ. 67 ರನ್ಗೆ 7 ವಿಕೆಟ್ ಕಳೆದುಕೊಂಡು ಇನ್ನೂ 83 ರನ್ ಹಿನ್ನಡೆಯೊಂದಿಗೆ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಅಲೆಕ್ಸ್ ಕ್ಯಾರಿ(19) ಮತ್ತು ಮಿಚೆಲ್ ಸ್ಟಾರ್ಕ್(6) ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಬುಮ್ರಾ ಕಮಾಲ್
ಭಾರತದ ಸಣ್ಣ ಮೊತ್ತವನ್ನು ಬೆನ್ನಟ್ಟಿದ ಆಸ್ಟ್ರೇಲಿಯಾಕ್ಕೆ ಉಸ್ತುವಾರಿ ನಾಯಕ ಜಸ್ಪ್ರೀತ್ ಆರಂಭದಲ್ಲೇ ಮೂರು ವಿಕೆಟ್ ಕಿತ್ತು ಆಘಾತವಿಕ್ಕಿದರು. ಅನುಭವಿ ಆಟಗಾರ ಸ್ಟೀವನ್ ಸ್ಮಿತ್ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರೆ, ಉಸ್ಮಾನ್ ಖಾವಾಜ(8) ಮತ್ತು ಚೊಚ್ಚಲ ಪಂದ್ಯವನ್ನಾಡುತ್ತಿರುವ ನಾಥನ್ ಮೆಕ್ಸ್ವೀನಿ(10) ಅಗ್ಗಕ್ಕೆ ಔಟಾದರು. ಪ್ರತಿ ಪಂದ್ಯದಲ್ಲಿಯೂ ಭಾರತಕ್ಕೆ ಕಂಟಕವಾಗಿ ಕಾಡುತ್ತಿದ್ದ ಟ್ರಾವಿಸ್ ಹೆಡ್(11) ಅವರನ್ನು ಹರ್ಷಿತ್ ರಾಣಾ ಕ್ಲೀನ್ ಬೌಲ್ಡ್ ಮಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿಕೆಟ್ ಖಾತೆ ತೆರೆದರು. ಮಾರ್ನಸ್ ಲಬುಶೇನ್ 52 ಎಸೆತ ಎದುರಿಸಿದರೂ ಗಳಿಸಿದ್ದು ಕೇವಲ 2 ರನ್. ಈ ವೇಳೆ ವಿರಾಟ್ ಕೊಹ್ಲಿಯಿಂದ ಕ್ಯಾಚ್ ಕೈ ಚೆಲ್ಲಿ ಜೀವದಾನ ಪಡೆದರೂ ಇದರ ಲಾಭವೆತ್ತಲು ಅವರಿಗೆ ಸಾಧ್ಯವಾಗಲಿಲ್ಲ. ಘಾತಕ ಬೌಲಿಂಗ್ ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ 17 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ 17 ರನ್ಗೆ 2 ವಿಕೆಟ್ ಉರುಳಿಸಿದ್ದಾರೆ. ಹರ್ಷಿತ್ ರಾಣ ಒಂದು ವಿಕೆಟ್ ಪಡೆದಿದ್ದಾರೆ.
Jasprit Bumrah leads India’s terrific response after getting bowled out early.#WTC25 | #AUSvIND 📝: https://t.co/ptgPRvmH6d pic.twitter.com/FXHLLmYPCb
— ICC (@ICC) November 22, 2024
ವಿವಾದಾತ್ಮಕ ತೀರ್ಪಿಗೆ ಬಲಿಯಾದ ರಾಹುಲ್
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಕೂಡ ಆರಂಭಿಕ ಆಘಾತ ಎದುರಿಸಿತ್ತು. ಯಶಸ್ವಿ ಜೈಸ್ವಾಲ್ ಮತ್ತು ದೇವದತ್ತ ಪಡಿಕ್ಕಲ್ ಅವರನ್ನು ಶೂನ್ಯಕ್ಕೆ ಕಳೆದುಕೊಂಡಿತು. ಆ ಬಳಿಕ ಬಂದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ 5 ರನ್ಗೆ ಆಟ ಮುಗಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ಬದಿಯಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ನಡೆಸುತ್ತಿದ್ದ ಕನ್ನಡಿಗ ಕೆ.ಎಲ್ ರಾಹುಲ್ ಮೂರನೇ ಅಂಪೈರ್ ರಿಚರ್ಡ್ ಇಲ್ಲಿಂಗ್ವರ್ತ್ ಅವರ ವಿವಾದಾತ್ಮಕ ತೀರ್ಪಿಗೆ ಬಲಿಯಾದರು.
ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಗ್ಲೌಸ್ ಸೇರಿತು. ಔಟ್ಗಾಗಿ ಆಸೀಸ್ ಆಟಗಾರರು ಮನವಿ ಮಾಡಿದರೂ ಮೈದಾನದ ಅಂಪೈರ್ ನಾಟೌಟ್ ಎಂದರು. ಈ ವೇಳೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಡಿಆರ್ಎಸ್ ಮನವಿ ಮಾಡಿದರು. ಟಿವಿ ಅಂಪೈರ್ ಪರಿಶೀಲನೆ ಮಾಡುವಾಗ ಅಲ್ಟ್ರಾ ಎಡ್ಜ್ನಲ್ಲಿ ಕೊಂಚ ಸ್ಪೈಕ್ ಕಾಣಿಸಿತ್ತು. ಆದರೆ ಇಲ್ಲಿ ಬ್ಯಾಟ್ ಚೆಂಡಿಗೆ ಬಡಿಯದೆ, ಪ್ಯಾಡ್ಗೆ ತಾಗಿದ್ದು ಸ್ಪಷ್ಟವಾಗಿ ಗೋಚರಿಸಿದ್ದರೂ ಇಲ್ಲಿಂಗ್ವರ್ತ್ ಔಟ್ ಎಂದು ತೀರ್ಪು ಪ್ರಕಟಿಸಿದರು. 26 ರನ್ ಗಳಿಸಿದ್ದ ರಾಹುಲ್ ಸಿಟ್ಟಿನಿಂದಲೇ ಪೆವಿಲಿಯನ್ಗೆ ಹೆಜ್ಜೆ ಹಾಕಿದರು.
ಮಿಂಚಿದ ನಿತೀಶ್
ರಾಹುಲ್ ವಿಕೆಟ್ ಪತನ ಬಳಿಕ 7ನೇ ವಿಕೆಟ್ಗೆ ಜತೆಯಾದ ರಿಷಭ್ ಪಂತ್ ಮತ್ತು ಚೊಚ್ಚಲ ಪಂದ್ಯವನ್ನಾಡುತ್ತಿರುವ ನಿತೀಶ್ ರೆಡ್ಡಿ ಸಣ್ಣ ಮಟ್ಟದ ಬ್ಯಾಟಿಂಗ್ ಹೋರಾಟವೊಂದನ್ನು ನಡೆಸಿ 48 ರನ್ ಒಟ್ಟುಗೂಡಿಸಿದರು. ಪಂತ್ ವಿಕೆಟ್ ಬಿದ್ದೊಡನೆ ಮತ್ತೆ ಭಾರತ ಕುಸಿತ ಕಂಡಿತು. ಅಂತಿಮವಾಗಿ ಪಂತ್ 37 ರನ್ ಬಾರಿಸಿದರೆ, ನಿತೀಶ್ ರೆಡ್ಡಿ 41 ರನ್ ಬಾರಿಸಿದರು. ನಿತೀಶ್ ಅವರದ್ದೇ ತಂಡದ ಪರ ದಾಖಲಾದ ಗರಿಷ್ಠ ಮೊತ್ತ. ಆಸ್ಟ್ರೇಲಿಯಾ ಪರ ಜೋಶ್ ಹ್ಯಾಜಲ್ವುಡ್ 29 ರನ್ಗೆ 4 ವಿಕೆಟ್ ಕಿತ್ತರೆ, ನಾಯಕ ಪ್ಯಾಟ್ ಕಮಿನ್, ಮಿಚೆಲ್ ಸ್ಟಾರ್ಕ್ ಮತ್ತು ಆಲ್ರೌಂಡರ್ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದರು. ಎಲ್ಲ ವಿಕೆಟ್ಗಳು ವೇಗಿಗಳ ಪಾಲಾಯಿತು.
ಮೂವರು ಪದಾರ್ಪಣೆ
ಈ ಪಂದ್ಯದಲ್ಲಿ ಒಟ್ಟು ಮೂವರು ಪದಾರ್ಪಣೆ ಮಾಡಿದರು. ಭಾರತ ಪರ ನಿತೀಶ್ ಕುಮಾರ್ ರೆಡ್ಡಿ ಮತ್ತು ಹರ್ಷಿತ್ ರಾಣಾ, ಆಸೀಸ್ ಪರ ನಾಥನ್ ಮೆಕ್ಸ್ವೀನಿ ಚೊಚ್ಚಲ ಟೆಸ್ಟ್ ಕ್ಯಾಪ್ ಪಡೆದರು.