ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ (IND vs AUS) ಆರಂಭಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಇವೆ. ಇದರ ನಡುವೆ ಈ ಬಾರಿ ಟೆಸ್ಟ್ ಸರಣಿ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಚರ್ಚೆಗಳು ನಡೆಸುತ್ತಿದ್ದಾರೆ. ಕೆಲವರು ಭಾರತ ಟೆಸ್ಟ್ ಸರಣಿ ಗೆಲ್ಲಲಿದೆ ಎಂದರೆ, ಇನ್ನೂ ಕೆಲವರು ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇದರ ನಡುವೆ ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್, ಪ್ಯಾಟ್ ಕಮಿನ್ಸ್ ನಾಯಕತ್ವದ ಆತಿಥೇಯ ತಂಡ ಟೆಸ್ಟ್ ಸರಣಿಯನ್ನು 3-2 ಅಂತರದಲ್ಲಿ ಗೆಲುವು ಪಡೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ಕಳೆದ ಎರಡು ಪ್ರವಾಸಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಸತತ ಎರಡು ಬಾರಿ ಸೋಲಿಸಿ ಐತಿಹಾಸಿಕ ಸಾಧನೆ ಮಾಡಿತ್ತು. ಇದೀಗ ಕಾಂಗರೂ ನಾಡಿನಲ್ಲಿ ಹ್ಯಾಟ್ರಿಕ್ ಟೆಸ್ಟ್ ಸರಣಿ ಗೆಲ್ಲಲು ಎದುರು ನೋಡುತ್ತಿದೆ. ಆದರೆ, ಈ ಬಾರಿ ಭಾರತ ತಂಡಕ್ಕೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಸುಲಭವಾಗಿಲ್ಲ. ಏಕೆಂದರೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ದ 0-3 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಸೋತಿದೆ ಹಾಗೂ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಸ್ಟಾರ್ ಆಟಗಾರರು ಫಾರ್ಮ್ ಕಳೆದುಕೊಂಡಿದ್ದಾರೆ.
ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ: ಹಾಗ್
ರೆವ್‌ಸ್ಪೋರ್ಟ್ಸ್ ಜೊತೆ ಮಾತನಾಡಿದ ಬ್ರಾಡ್ ಹಾಗ್, “ಆಸ್ಟ್ರೇಲಿಯಾ ತಂಡ 3-2 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ. ಏಕೆಂದರೆ ಪರ್ತ್ ಹಾಗೂ ಬ್ರಿಸ್ಬೇನ್ ಸೇರಿದಂತೆ ಅಡಿಲೇಡ್‌ನಲ್ಲಿ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಿಸಲಾಗುತ್ತಿದೆ. ಆಸ್ಟ್ರೇಲಿಯಾ ತಂಡದ ವೇಗದ ಬೌಲಿಂಗ್ ವಿಭಾಗವನ್ನು ನೋಡಿದಾಗ, ಅನುಭವಿ ವೇಗಿಗಳೇ ಇದ್ದಾರೆ ಹಾಗೂ ತವರು ಕಂಡೀಷನ್ಸ್ ಬಗ್ಗೆ ಇವರಿಗೆ ತುಂಬಾ ಚೆನ್ನಾಗಿ ತಿಳಿದಿದೆ. ತಮ್ಮ ಅನುಭವದ ಆಧಾರದ ಮೇಲೆ ವೇಗಿಗಳು ಅಗ್ರ ಸ್ಥಾನದಲ್ಲಿದ್ದಾರೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2014-15ರ ಸಾಲಿನಲ್ಲಿ ಆಸ್ಟ್ರೇಲಿಯಾ ತಂಡ ಕೊನೆಯ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಅಂದಿನಿಂದ ಇಲ್ಲಿಯವರೆಗೂ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ಸರಣಿಯಲ್ಲಿ ಪ್ರಾಬಲ್ಯ ಮೆರೆದಿದೆ. ತವರಿನಲ್ಲಿ ಗೆಲ್ಲುವುದಲ್ಲದೆ, ಆಸ್ಟ್ರೇಲಿಯಾ ತಂಡವನ್ನು ಅವರದೇ ನೆಲದಲ್ಲಿ ಸೋಲಿಸಿ ಐತಿಹಾಸಿಕ ಸಾಧನೆ ಮಾಡಿದೆ. ಆದರೆ, ಕಳೆದ 10 ವರ್ಷಗಳ ಬಳಿಕ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾ ಗೆಲ್ಲಲಿದೆ ಎಂಬುದು ಬ್ರಾಡ್ ಹಾಗ್ ಅಭಿಪ್ರಾಯವಾಗಿದೆ.
IND vs AUS: ಮೊದಲ ಟೆಸ್ಟ್‌ಗೆ ರೋಹಿತ್, ಗಿಲ್, ರಾಹುಲ್ ಅಲಭ್ಯ!
ಪರ್ತ್ ಟೆಸ್ಟ್‌ಗೆ ಅಶ್ವಿನ್ OR ಜಡೇಜಾ?
ಪರ್ತ್ ಟೆಸ್ಟ್‌ನಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರ ನಡುವೆ ಒಬ್ಬರು ಆಡಬಹುದು. ಏಕೆಂದರೆ ಫಾಸ್ಟ್ ಬೌಲಿಂಗ್ ಪಿಚ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳನ್ನು ಟೀಮ್ ಮ್ಯಾನೇಜ್‌ಮೆಂಟ್ ಆಡಿಸುವುದು ಅನುಮಾನ. ಆದರೆ, ಮೊದಲನೇ ಟೆಸ್ಟ್ ಪಂದ್ಯದಲ್ಲಿ ಅನುಭವದ ಆಧಾರದ ಮೇಲೆ ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ಅವರನ್ನು ಆಡಿಸಬೇಕೆಂದು ಬ್ರಾಡ್ ಹಾಗ್ ಆಗ್ರಹಿಸಿದ್ದಾರೆ.
“ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಇಬ್ಬರೂ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆಡಬೇಕೆಂದು ಭಾವಿಸುತ್ತೇನೆ. ಜಡೇಜಾ ಅವರು ಪ್ರಥಮ ಇನಿಂಗ್ಸ್‌ಗಳಲ್ಲಿ ತಂಡಕ್ಕೆ ನೆರವಾಗಬಲ್ಲರು. ಏಕೆಂದರೆ ಪಿಚ್ ಹಸಿರಿನಿಂದ ಕೂಡಿರುವುದರಿಂದ ಜಡೇಜಾ ಚೆಂಡನ್ನು ಸ್ಕಿಡ್ ಮಾಡಬಹುದು. ಇನ್ನು ಪಿಚ್ ನಿಧಾನವಾಗುತ್ತಿದ್ದಂತೆ ಭಾರತ ತಂಡಕ್ಕೆ ಆರ್ ಅಶ್ವಿನ್ ನೆರವಾಗಬಹುದು. ಈ ಇಬ್ಬರೂ ವಿಶಿಷ್ಠವಾಗಿದ್ದಾರೆ ಹಾಗೂ ವಿಭಿನ್ನ ದಿನಗಳಲ್ಲಿ ತಂಡಕ್ಕೆ ನೆರವಾಗಬಲ್ಲರು,” ಎಂದು ಆಸೀಸ್ ಮಾಜಿ ಸ್ಪಿನ್ನರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.