Wednesday, 18th December 2024

IND vs AUS: ಡ್ರಾಗೊಂಡ ಬಳಿಕ ಭಾರತದ ಟೆಸ್ಟ್​ ವಿಶ್ವಕಪ್​ ಫೈನಲ್​ ಹಾದಿ ಲೆಕ್ಕಾಚಾರ ಹೇಗಿದೆ?

ಬ್ರಿಸ್ಬೇನ್‌: ಆಸ್ಟ್ರೇಲಿಯಾ(IND vs AUS) ವಿರುದ್ಧದ 5 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದು, ದ್ವಿತೀಯ ಪಂದ್ಯದಲ್ಲಿ ಸೋಲು ಕಂಡ ಪರಿಣಾಮ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌(WTC final) ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಡ್ರಾ ಸಾಧಿಸಿದ ಪರಿಣಾಮ ಮತ್ತೆ ಭಾರತದ ಅಂಕ ಕಡಿತಗೊಂಡಿದೆ. ಸತತ 3ನೇ ಬಾರಿ ಡಬ್ಲ್ಯುಟಿಸಿ ಫೈನಲ್​ಗೇರಬೇಕಾದರೆ ಭಾರತ ಮುಂದೆ ಏನು ಮಾಡಬೇಕು ಎಂಬ ಕಿರು ಲೆಕ್ಕಾಚಾರ ಇಲ್ಲಿದೆ.

ಮುಂದಿನ 2 ಪಂದ್ಯಗಳನ್ನು ಭಾರಿ ಅಂತರದಿಂದ ಗೆದ್ದರೆ ಭಾರತದ ಫೈನಲ್‌ ಆಸೆ ಜೀವಂವಾಗಿರುತ್ತದೆ. ಹೀಗಾಗಿ ಭಾರತಕ್ಕೆ ಉಳಿದಿರುವ 2 ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡವಿದೆ. ಒಂದು ಪಂದ್ಯ ಗೆಲುವು-ಡ್ರಾ ಗೊಂಡರೂ ಭಾರತ ಫೈನಲ್‌ ರೇಸ್‌ನಿಂದ ಹೊರಬೀಳಲಿದೆ. ಸದ್ಯ ಭಾರತದ WTC ಅಂಕಗಳ ಶೇಕಡಾವಾರು (PCT) 57.29% ರಿಂದ 55.88% ಕ್ಕೆ ಇಳಿದಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿದೆ.

ಭಾರತಕ್ಕೆ ಇನ್ನು ಯಾವುದೇ ಸರಣಿ ಉಳಿದಿಲ್ಲ. ಅಗ್ರಸ್ಥಾನಿ ದಕ್ಷಿಣ ಆಫ್ರಿಕಾ ಮತ್ತು ದ್ವಿತೀಯ ಸ್ಥಾನಿ ಆಸ್ಟ್ರೇಲಿಯಾಕ್ಕೆ ಇನ್ನೊಂದು ಸರಣಿ ಬಾಕಿ ಇದೆ. ದಕ್ಷಿಣ ಆಫ್ರಿಕಾ ತವರಿನಲ್ಲಿ ಪಾಕಿಸ್ತಾನ ವಿರುದ್ಧ, ಆಸ್ಟ್ರೇಲಿಯಾ ತಂಡ ಶ್ರೀಲಂಕಾ ವಿರುದ್ಧ ತಲಾ 2 ಪಂದ್ಯಗಳ ಸೆರಣಿಯನ್ನಾಡಲಿದೆ.

ಭಾರತ ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ನಡೆಯುವ ಮುಂದಿನ ಎರಡು ಟೆಸ್ಟ್‌ಗಳನ್ನು ಗೆದ್ದರೆ ಗರಿಷ್ಠ 138 ಅಂಕಗಳನ್ನು ಸಂಗ್ರಹಿಸಬಹುದು ಮತ್ತು 60.52% ಅಂಕದೊಂದಿಗೆ ಫೈನಲ್‌ ತಲುಪಬಹುದು. ಆದರೆ ಇಲ್ಲಿಯೂ ಕೆಲ ಲೆಕ್ಕಾಚಾರವಿದೆ. ದಕ್ಷಿಣ ಆಫ್ರಿಕಾ ಮತ್ತು ಆಸೀಸ್‌ ತಂಡಗಳು ಮಂದಿನ ಸರಣಿಯಲ್ಲಿ ಸೋಲಬೇಕು. ಆಸೀಸ್‌ ಮತ್ತು ಹರಿಣ ಪಡೆ ಮುಂದಿನ ಸರಣಿ ಗೆದ್ದರೆ ಭಾರತಕ್ಕೆ ಉಳಿದಿರುವ 2 ಪಂದ್ಯಗಳನ್ನೂ ಗೆದ್ದರೂ ಯಾವುದೇ ಲಾಭವಾಗದು.

ಇದನ್ನೂ ಓದಿ AUS vs IND: ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯ

ದಕ್ಷಿಣ ಆಫ್ರಿಕಾಗೆ ಒಂದು ಗೆಲುವು ಸಾಕು

ಅಗ್ರಸ್ಥಾನಿ ದಕ್ಷಿಣ ಆಫ್ರಿಕಾ ತಂಡಕ್ಕೆ ಫೈನಲ್‌ ಪ್ರವೇಶಿಸಲು ಇನ್ನೊಂದು ಗೆಲುವು ಸಾಧಿಸಿದರೆ ಸಾಕು. ಅದು ಕೂಡ ತವರಿನಲ್ಲಿ ನಡೆಯುತ್ತಿರುವ ಸರಣಿಯಾದ ಕಾರಣ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸುವುದರಲ್ಲಿ ಅನುಮಾನವೇ ಬೇಡ. ಒಂದೊಮ್ಮೆ ದಕ್ಷಿಣ ಆಫ್ರಿಕಾ ಫೈನಲ್‌ ಪ್ರವೇಶಿಸಿದರೆ ಚೊಚ್ಚಲ ಬಾರಿಗೆ ಫೈನಲ್‌ ಆಡಲಿದೆ.

ಆದಾಗ್ಯೂ, ದಕ್ಷಿಣ ಆಫ್ರಿಕಾ ಉಳಿದಿರುವ ಎರಡೂ ಪಂದ್ಯಗಳಲ್ಲಿ ಸೋತರೆ, ಎರಡನೇ ಫೈನಲಿಸ್ಟ್ ಅನ್ನು ನಿರ್ಧರಿಸಲು ಆಸ್ಟ್ರೇಲಿಯಾ-ಶ್ರೀಲಂಕಾ ಸರಣಿಯ ಫಲಿತಾಂಶವನ್ನು ಅವಲಂಬಿಸಬೇಕಿದೆ. ಒಂದೊಮ್ಮೆ ದಕ್ಷಿಣ ಆಫ್ರಿಕಾ ತಂಡ ಪಾಕ್‌ ವಿರುದ್ಧ ಸರಣಿ ಸೋತರೆ ಆಗ ಭಾರತ ಆಸೀಸ್‌ ವಿರುದ್ಧ ಒಂದು ಗೆಲುವು ಸಾಧಿಸಿದರೂ ಫೈನಲ್‌ ತಲುಪಬಹುದು.