Monday, 18th November 2024

IND vs AUS: ಆಸೀಸ್‌ನಲ್ಲೇ ಉಳಿದ ಪಡಿಕ್ಕಲ್; ರಾಣಾ ಪದಾರ್ಪಣೆ ನಿರೀಕ್ಷೆ

ಪರ್ತ್​: ಭಾರತ ತಂಡದ ನಾಯಕ ರೋಹಿತ್​ ಶರ್ಮ(Rohit Sharma) ಅವರ ಆಸ್ಟ್ರೆಲಿಯಾ(IND vs AUS) ಪ್ರಯಾಣ ವಿಳಂಬವಾಗಲಿದೆ. ಹೀಗಾಗಿ ಪರ್ತ್‌ನಲ್ಲಿ ನಡೆಯುವ ಮೊದಲ ಪಂದ್ಯಕ್ಕೆ ಉಪನಾಯಕ ಜಸ್​ಪ್ರೀತ್​ ಬುಮ್ರಾ(Jasprit Bumrah) ಭಾರತ ತಂಡವನ್ನು ಮುನ್ನಡೆಸುವುದು ಬಹುತೇಕ ಖಚಿತಗೊಂಡಿದೆ. ಡಿಸೆಂಬರ್​ 6ರಿಂದ ಅಡಿಲೇಡ್​ನಲ್ಲಿ ಪಿಂಕ್​ಬಾಲ್​ನಲ್ಲಿ ನಡೆಯಲಿರುವ 2ನೇ ಟೆಸ್ಟ್​ಗೆ ಮುನ್ನ ರೋಹಿತ್​ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಪರ್ತ್​ನ ಆಪ್ಟಸ್​ ಸ್ಟೇಡಿಯಂನ ಪಿಚ್​ ಭಾರಿ ಬೌನ್ಸ್​ನಿಂದ ಕೂಡಿರುವ ಕಾರಣದಿಂದ ಯುವ ವೇಗದ ಬೌಲರ್‌ ​ ನಿತೀಶ್ ರಾಣಾ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಪರ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ. ಈ ಮೂಲಕ 4ನೇ ವೇಗದ ಬೌಲರ್​ ಆಗಿ ಅವರನ್ನು ಬಳಸಿಕೊಳ್ಳಲು ಭಾರತ ಯೋಜಿಸಿದೆ. 22 ವರ್ಷದ ದಿಲ್ಲಿಯ ವೇಗಿ ನಿತೀಶ್​ ಇದುವರೆಗೆ ದಿಲ್ಲಿ ಪರ 14 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಈ ವೇಳೆ 22 ವಿಕೆಟ್​ ಕಬಳಿಸಿದ್ದಾರೆ. ಐಪಿಎಲ್​ನಲ್ಲಿ ಕೆಕೆಆರ್‌​ ಪರವೂ ಮಿಂಚಿದ್ದರು.

ಪಡಿಕ್ಕಲ್‌ಗೆ ಅವಕಾಶ?

ಭಾರತ ಎ ತಂಡದ ಸದಸ್ಯನಾಗಿದ್ದ ಕರ್ನಾಟಕದ ಬ್ಯಾಟರ್‌ ದೇವದತ್​ ಪಡಿಕ್ಕಲ್​ ಆಸೀಸ್‌ನಲ್ಲಿಯೇ ಉಳಿದಿದ್ದಾರೆ. ಶುಭಮಾನ್​ ಗಿಲ್​ ಎಡಗೈ ಹೆಬ್ಬೆರಳಿನ ಮೂಳೆ ಮುರಿತಕ್ಕೆ ಒಳಗಾಗಿರುವುದರಿಂದ ಅವರ ಸ್ಥಾನಕ್ಕೆ ಮೀಸಲು ಬ್ಯಾಟರ್​ ಆಗಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ದ್ವಿತೀಯ ಟೆಸ್ಟ್‌ ವೇಳೆಗೂ ಗಿಲ್‌ ಚೇತರಿಕೆ ಕಾಣುವುದು ಅನುಮಾನ ಎನ್ನಲಾಗಿದೆ. ಆಸ್ಟ್ರೆಲಿಯಾ ಎ ವಿರುದ್ಧದ 2 ಚತುರ್ದಿನ ಪಂದ್ಯಗಳ 4 ಇನಿಂಗ್ಸ್​ಗಳಲ್ಲಿ ಪಡಿಕ್ಕಲ್​ 36, 88, 26 ಮತ್ತು 1 ರನ್​ ಗಳಿಸಿದ್ದರು. ಇದುವರೆಗೆ ಭಾರತ ಪರ ಏಕೈಕ ಟೆಸ್ಟ್​ ಆಡಿರುವ 24 ವರ್ಷದ ಪಡಿಕ್ಕಲ್​, 65 ರನ್​ ಬಾರಿಸಿ ಮಿಂಚಿದ್ದರು. ಒಂದೊಮ್ಮೆ ಗಿಲ್‌ ಟೂರ್ನಿಯಿಂದ ಹೊರಬಿದ್ದರೆ ಆಗ ಪಡಿಕ್ಕಲ್ ಆಸೀಸ್‌ ಸರಣಿಯ ಭಾಗವಾಗಲಿದ್ದಾರೆ.

ಇದನ್ನೂ ಓದಿ Border-Gavaskar Trophy: ಆಸೀಸ್‌ ಟೆಸ್ಟ್‌ಗೆ ಬುಮ್ರಾ ನಾಯಕನಾಗಲಿ; ಗಾವಸ್ಕರ್

ಶಮಿ ಆಯ್ಕೆ ಅನುಮಾನ

ವರ್ಷದ ಬಳಿಕ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದು 7 ವಿಕೆಟ್​ ಕಬಳಿಸಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಪುನರಾಗಮನ ಮಾಡಿದ್ದ ಮೊಹಮದ್​ ಶಮಿ ಆಸೀಸ್‌ ವಿರುದ್ಧದ ದ್ವಿತೀಯ ಟೆಸ್ಟ್‌ ವೇಳೆಗೆ ತಂಡ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಬಿಸಿಸಿಐ ಶಮಿ ಸೇರ್ಪಡೆಗೆ ಅವಸರ ತೋರುವುದಿಲ್ಲ ಎನ್ನಲಾಗಿದೆ. ಶಮಿ ಇನ್ನಷ್ಟು ದೇಶೀಯ ಪಂದ್ಯಗಳಲ್ಲಿ ಆಡಿ ಹಿಂದಿನ ಲಯ ಕಂಡುಕೊಳ್ಳಲಿ ಎಂದು ಟೀಮ್​ ಇಂಡಿಯಾದ ಮ್ಯಾನೇಜ್​ಮೆಂಟ್​ ಕೂಡ ಬಯಸಿದೆ ಎನ್ನಲಾಗಿದೆ. ಮುಂದಿನ ಫೆಬ್ರವರಿಯಲ್ಲಿ ನಡೆಯುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಶಮಿಯನ್ನು ಕಣಕ್ಕಿಳಿಸುವ ಯೋಜನೆ ಬಿಸಿಸಿಐನದ್ದು ಎಂದು ತಿಳಿದುಬಂದಿದೆ. ಇದರಿಂದಾಗಿ ಶಮಿ ಮುಂಬರುವ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲೂ ಆಡುವ ನಿರೀಕ್ಷೆ ಇದೆ.