Tuesday, 17th December 2024

IND vs AUS: ಅರ್ಧಶತಕ ಸಿಡಿಸಿದ ರವೀಂದ್ರ ಜಡೇಜಾ ಬಗ್ಗೆ ಕೆಎಲ್‌ ರಾಹುಲ್‌ ಹೇಳಿದ್ದಿದು!

‘He’s been brilliant with bat for India for many years’-KL Rahul’s rich praise for Ravindra Jadeja:

ಬ್ರಿಸ್ಬೇನ್‌: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದ (IND vs AUS) ನಾಲ್ಕನೇ ದಿನ ಅರ್ಧಶತಕ ಸಿಡಿಸಿದ ಭಾರತ ತಂಡದ ಸ್ಟಾರ್‌ ಆಲ್‌ರೌಂಡರ್‌ ರವೀಂದ್ರ ಜಡೇಜಾಗೆ ಸಹ ಆಟಗಾರ ಹಾಗೂ ಕನ್ನಡಿಗ ಕೆಎಲ್‌ ರಾಹುಲ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ರವೀಂದ್ರ ಜಡೇಜಾ ಅರ್ಧಶತಕದ ಬಲದಿಂದ ಭಾರತ ತಂಡ ಫಾಲೋ ಆನ್‌ನಿಂದ ತಪ್ಪಿಸಿಕೊಂಡಿತ್ತು.

ರೋಹಿತ್‌ ಶರ್ಮಾ ವಿಕೆಟ್‌ ಒಪ್ಪಿಸಿಕೊಂಡಿದ್ದ ಬಳಿಕ ಕ್ರೀಸ್‌ಗೆ ಬಂದಿದ್ದ ರವೀಂದ್ರ ಜಡೇಜಾ ಅತ್ಯಂತ ಜವಾಬ್ದಾರಿಯುತವಾಗಿ ಬ್ಯಾಟ್‌ ಮಾಡಿದ್ದರು. ಅವರು ಎದುರಿಸಿದ್ದ 123 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ಏಳು ಬೌಂಡರಿಗಳೊಂದಿಗೆ 77 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಭಾರತ ತಂಡದ ಮೊತ್ತವನ್ನು 200ರ ಗಡಿ ದಾಟುವಲ್ಲಿ ನೆರವು ನೀಡಿದ್ದರು.‌

ರವೀಂದ್ರ ಜಡೇಜಾಗೆ ರಾಹುಲ್‌ ಮೆಚ್ಚುಗೆ

ರವೀಂದ್ರ ಜಡೇಜಾ ವಿಕೆಟ್‌ ಒಪ್ಪಿಸುವುದಕ್ಕೂ ಮುನ್ನ ಕೆಎಲ್‌ ರಾಹುಲ್‌ ಕೂಡ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು ಹಾಗೂ ಅವರು ಆಡಿದ್ದ 139 ಎಸೆತಗಳಲ್ಲಿ 84 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡ ಫಾಲೋ ಆನ್‌ ತಪ್ಪಿಸಿಕೊಳ್ಳುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಅಂದ ಹಾಗೆ ನಾಲ್ಕನೇ ದಿನದಾಟದ ಬಳಿಕ ಮಾತನಾಡಿದ ಕೆಎಲ್‌ ರಾಹುಲ್‌, ತಮ್ಮ ಸಹ ಆಟಗಾರ ರವೀಂದ್ರ ಜಡೇಜಾ ಅವರ ಇನಿಂಗ್ಸ್‌ ಅನ್ನು ಮುಕ್ತಕಂಠದಿಂದ ಗುಣಗಾನ ಮಾಡಿದರು.

“ರವೀಂದ್ರ ಜಡೇಜಾ ಅವರ ಪಾಲಿಗೆ ಇಂದು (ಮಂಗಳವಾರ) ಅದ್ಭುತವಾಗಿತ್ತು. ಅವರು ನಮಗೆ ಕಳೆದ ಹಲವು ವರ್ಷಗಳಿಂದ ಕೆಳ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದಾರೆ. ನಾವು ಇದನ್ನೇ ನಿರೀಕ್ಷೆ ಮಾಡುತ್ತೇವೆ. ಹಲವು ವರ್ಷಗಳಿಂದ ಅವರು ಇದನ್ನು ಸಾಬೀತುಪಡಿಸಿದ್ದಾರೆ. ಅವರು ಕ್ರೀಸ್‌ಗೆ ಬಂದಾಗ ನಮ್ಮ ನಡುವಣ ಜತೆಯಾಟದಿಂದಾಗಿ ನನಗೆ ತುಂಬಾ ಖುಷಿ ಇದೆ,” ಎಂದು ಕೆಎಲ್‌ ರಾಹುಲ್‌ ತಿಳಿಸಿದ್ದಾರೆ.

ಒಂದೊಂದು ರನ್‌ ನಿರ್ಣಾಯಕವಾಗಿತ್ತು: ಕೆಎಲ್‌ ರಾಹುಲ್

“ಒಂದು ಹಂತದಲ್ಲಿ ನಮಗೆ ಜತೆಯಾಟದ ಅಗತ್ಯವಿತ್ತು. ನಾವು ಟೈಲೆಂಡರ್‌ಗಳಿಂದ 70-80 ರನ್‌ಗಳನ್ನು ಕಲೆ ಹಾಕಿದ್ದೆವು. ಫಾಲೋ ಆನ್‌ ಅನ್ನು ತಪ್ಪಿಸಿಕೊಳ್ಳುವ ಸಲುವಾಗಿ ಇಂದು (ಮಂಗಳವಾರ) ನಮಗೆ ಒಂದೊಂದು ರನ್‌ ಕೂಡ ಅತ್ಯಂತ ನಿರ್ಣಾಯಕವಾಗಿತ್ತು. ನಮ್ಮಿಂದ ಎಷ್ಟೊಂದು ರನ್‌ ಸಾಧ್ಯವಾಗುತ್ತದೋ ಅಷ್ಟೊಂದು ರನ್‌ಗಳನ್ನು ಕಲೆ ಹಾಕಿದ್ದೇವೆ. ಅದರಂತೆ ಜಡೇಜಾ ಕೂಡ ಸಾಧ್ಯವಾದಷ್ಟು ರನ್‌ ಹೊಡೆದಿದ್ದಾರೆ. ಹೌದು ಅವರು ತುಂಬಾ ಅನುಭವಿ ಬ್ಯಾಟ್ಸ್‌ಮನ್‌. ಅವರು ಹಲವು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದಾರೆ,” ಎಂದು ಕನ್ನಡಿಗ ತಮ್ಮ ಸಹ ಆಟಗಾರರನ್ನು ಗುಣಗಾಣ ಮಾಡಿದ್ದಾರೆ.

ಜಡೇಜಾ ಬ್ಯಾಟಿಂಗ್‌ ಅನ್ನು ಆನಂದಿಸುತ್ತೇನೆ

“ಕಠಿಣ ಹಂತದಲ್ಲಿ ತಂಡಕ್ಕಾಗಿ ರನ್‌ಗಳನ್ನು ಕಲೆ ಹಾಕಲು ಏನು ಮಾಡಬೇಕು? ಹೇಗೆ ಆಡಬೇಕೆಂಬುದನ್ನು ರವೀಂದ್ರ ಜಡೇಜಾ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಜಡೇಜಾ ಅವರ ಬೌಲಿಂಗ್‌ ಬಗ್ಗೆ ಮಾತ್ರ ಮಾತನಾಡಲಾಗುತ್ತದೆ. ಆದರೆ, ಅವರು ಬ್ಯಾಟಿಂಗ್‌ನಲ್ಲಿಯೂ ಅತ್ಯಂತ ಶ್ರೇಷ್ಠ ಪ್ರದರ್ಶನವನ್ನು ತೋರುತ್ತಾರೆ. ಅವರು ನಿಜಕ್ಕೂ ಅತ್ಯುತ್ತಮ ಬ್ಯಾಟಿಂಗ್‌ ತಂತ್ರವನ್ನು ಹೊಂದಿದ್ದಾರೆ ಹಾಗೂ ಅವರ ಜತೆಗಿನ ಬ್ಯಾಟಿಂಗ್‌ ಅನ್ನು ಆನಂದಿಸಿದ್ದೇನೆ. ಅವರು ಬ್ಯಾಟ್‌ ಮಾಡುವುದನ್ನು, ತರಬೇತಿ ಮತ್ತು ಅಭ್ಯಾಸವನ್ನು ನೋಡುವುದನ್ನು ನಾನು ಆನಂದಿಸುತ್ತೇನೆ,” ಎಂದು ಕೆಎಲ್‌ ರಾಹುಲ್‌ ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಓದಿ:IND vs AUS: ಅರ್ಧಶತಕ ಸಿಡಿಸಿ 58 ವರ್ಷಗಳ ಹಳೆಯ ದಾಖಲೆ ಮುರಿದ ರವೀಂದ್ರ ಜಡೇಜಾ!