ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ (IND vs AUS) ನಿಮಿತ್ತ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡಕ್ಕೆ ಆಸೀಸ್ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಮುಂದಿನ ಪಂದ್ಯದಲ್ಲಿ ಚಾಲೆಂಜಿಂಗ್ ಕಂಡಿಷನ್ ಇದ್ದರೂ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಆರಂಭಿಕ ಎರಡೂ ಟೆಸ್ಟ್ ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯವನ್ನು ಗೆದ್ದಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸದ್ಯ ಟೆಸ್ಟ್ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ. ಇದೀಗ ಉಭಯ ತಂಡಗಳು ಡಿಸೆಂಬರ್ 14 ರಂದು ಬ್ರಿಸ್ಬೇನ್‌ನ ದಿ ಗಬ್ಬಾ ಕ್ರೀಡಾಂಗಣದಲ್ಲಿ ನಡೆಯುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ.
ಭಾರತ ತಂಡ ಕಳೆದ ನಾಲ್ಕು ಇನಿಂಗ್ಸ್‌ಗಳ ಪೈಕಿ ಮೂರು ಇನಿಂಗ್ಸ್‌ಗಳಲ್ಲಿ 200ಕ್ಕೂ ಕಡಿಮೆ ಮೊತ್ತಕ್ಕೆ ಆಲ್‌ಔಟ್ ಆಗಿದೆ. ಈ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾ ದಿಗ್ಗಜ ಮ್ಯಾಥ್ಯೂ ಹೇಡನ್, ಭಾರತ ತಂಡ ಕನಿಷ್ಠ ಒಂದು ದಿನ ಪೂರ್ತಿ ಬ್ಯಾಟ್ ಮಾಡಬೇಕು ಹಾಗೂ 350 ರನ್‌ಗಳನ್ನು ಕಲೆ ಹಾಕಬೇಕೆಂದು ಸಲಹೆ ನೀಡಿದ್ದಾರೆ.
ಭಾರತ ತಂಡ ಮೊದಲು ಬ್ಯಾಟ್ ಮಾಡಬೇಕು
“ಭಾರತ ತಂಡ ಖಂಡಿತವಾಗಿಯೂ ಉತ್ತಮವಾಗಿ ಬ್ಯಾಟ್ ಮಾಡಬೇಕು. ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಕನಿಷ್ಠ ಒಂದು ದಿನ ಬ್ಯಾಟ್ ಮಾಡಬೇಕಾಗಿದೆ. ಆದರೆ, ಒಂದು ದಿನದ ಒಳಗೆ ಆಲ್‌ಔಟ್ ಆಗುವುದನ್ನು ಒಪ್ಪಲು ಸಾಧ್ಯವೇ ಇಲ್ಲ. ಒಂದು ವೇಳೆ ಚಾಲೆಂಜಿಂಗ್ ಕಂಡೀಷನ್ಸ್ ಇದ್ದರೂ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡಬೇಕು,” ಎಂದು ಮ್ಯಾಥ್ಯೂ ಹೇಡನ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
ಏಷ್ಯಾದ ಬಲಿಷ್ಠ ತಂಡವಾಗಿರುವ ಭಾರತ ತಂಡದ ಬೌಲರ್‌ಗಳು ದಿ ಗಬ್ಬಾ ಪಿಚ್‌ನಲ್ಲಿ ಆಫ್ ಸ್ಟಂಪ್ ಹೊರಗಡೆ ಪಿಚ್ ಮಾಡಬೇಕು ಹಾಗೂ ಹೆಚ್ಚುವರಿ ಬೌನ್ಸ್ ಹಾಕಬೇಕೆಂದು ಕ್ರಿಕೆಟ್ ವಿವರಣಾಕಾರ ಸಲಹೆ ನೀಡಿದ್ದಾರೆ. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಸೋತಿರುವ ಭಾರತ ತಂಡ, ರೆಡ್ ಬಾಲ್ ಟೆಸ್ಟ್‌ನಲ್ಲಿ ಗೆದ್ದು ಕಮ್‌ಬ್ಯಾಕ್ ಮಾಡಲಿದೆ ಎಂಬ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.
“ಬೌಲ್ ಮಾಡಲು ಭಾರತ ತಂಡಕ್ಕೆ ಅವಕಾಶ ಸಿಕ್ಕರೆ, ಬೌಲರ್‌ಗಳು ನಾಲ್ಕು ಹಾಗೂ ಐದನೇ ಸ್ಟಂಪ್‌ಗಳ ಮೇಲೆ ಬೌಲ್ ಮಾಡಬೇಕಾಗಿದೆ. ಅದರಲ್ಲಿಯೂ ವಿಶೇಷವಾಗಿ ಅವರು ಬೌನ್ಸ್ ಅನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ. ಬ್ರಿಸ್ಬೇನ್ ಪಿಚ್ ಫಾಸ್ಟ್ ಬೌಲರ್‌ಗಳಿಗೆ ನೆರವು ನೀಡಲಿದೆ. ಟೆಸ್ಟ್ ಕ್ರಿಕೆಟ್‌ಗೆ ರೆಡ್ ಬಾಲ್ ಹೆಚ್ಚು ಸೂಕ್ತವಾಗಿದೆ. ಆದರೆ, ಆಸ್ಟ್ರೇಲಿಯಾ ತಂಡ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಗೆದ್ದಿದ್ದು, ರೆಡ್ ಬಾಲ್‌ನಲ್ಲಿ ಭಾರತ ತಂಡ ಗೆಲ್ಲುವ ಸಾಧ್ಯತೆ ಇದೆ,” ಎಂದು ಮ್ಯಾಥ್ಯೂ ಹೇಡನ್ ತಿಳಿಸಿದ್ದಾರೆ.
ಕೊನೆಯ ಬಾರಿ ಬ್ರಿಸ್ಬೇನ್‌ನಲ್ಲಿ ಗೆದ್ದಿದ್ದ ಭಾರತ
ಭಾರತ ತಂಡ 2021ರಲ್ಲಿ ಕೊನೆಯ ಬಾರಿ ಬ್ರಿಸ್ಬೇನ್‌ನ ದಿ ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಆಡಿತ್ತು ಹಾಗೂ ಮೂರು ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಈ ಪಂದ್ಯದ ಪ್ರದರ್ಶನದಿಂದ ಸ್ಪೂರ್ತಿ ಪಡೆದುಕೊಂಡು ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಬೇಕು ಎಂದು ಆಸೀಸ್ ದಿಗ್ಗಜ ಸಲಹೆ ನೀಡಿದ್ದಾರೆ.
“ಬ್ರಿಸ್ಬೇನ್, ತುಂಬಾ ವಿಭಿನ್ನ ಚೆಂಡಿನ ಪಂದ್ಯ! ಇದು ತವರು ಪಂದ್ಯವಾಗಿದೆ ಆದರೆ, ಇದು ಭಾರತ ತಂಡಕ್ಕೆ ಒಳ್ಳೆಯ ಪಂದ್ಯವಾಗುವ ಸಾಧ್ಯತೆ ಇದೆ. ಏಕೆಂದರೆ ಕೊನೆಯ ಬಾರಿ ಇಲ್ಲಿ ಪಂದ್ಯವನ್ನು ಗೆದ್ದಿದೆ ಹಾಗೂ ಇದರ ನೆರವಿನಿಂದ ಟೀಮ್ ಇಂಡಿಯಾ ಅಂದು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದಿತ್ತು,” ಎಂದು ಆಸೀಸ್ ದಿಗ್ಗಜ ತಿಳಿಸಿದ್ದಾರೆ.
ಈ ಸುದ್ದಿಯನ್ನು ಓದಿ: IND vs AUS: ಮೊಹಮ್ಮದ್ ಸಿರಾಜ್‌ಗೆ ದಂಡ ವಿಧಿಸಬೇಕಿತ್ತೆಂದ ಮೈಕಲ್ ಕ್ಲಾರ್ಕ್!