Thursday, 14th November 2024

IND vs AUS: ಹೊಸ ಉಡುಪು, ಹೊಸ ಹುರುಪಿನೊಂದಿಗೆ ಟೀಮ್‌ ಇಂಡಿಯಾ ಅಭ್ಯಾಸ

ಪರ್ತ್‌: ಆಸ್ಟ್ರೇಲಿಯಾ(IND vs AUS) ವಿರುದ್ಧದ ಪ್ರತಿಷ್ಠಿತ ಬಾರ್ಡರ್‌ ಗವಾಸ್ಕರ್‌ ಟೆಸ್ಟ್‌(border-gavaskar trophy) ಸರಣಿಯನ್ನಾಡಲು ಭಾರತ ತಂಡ ಸಿದ್ಧತೆ ಆರಂಭಿಸಿದೆ. ನ್ಯೂಜಿಲ್ಯಾಂಡ್‌ ವಿರುದ್ಧದ ತವರಿನ ಸೋಲನ್ನು ಮರೆತು ಹೊಸ ಹುರುಪಿನೊಂದಿಗೆ ಟೀಮ್‌ ಇಂಡಿಯಾ ಆಟಗಾರರು ಹೊಸ ಉಡುಪು ತೊಟ್ಟು ಪರ್ತ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್‌, ರವೀಂದ್ರ ಜಡೇಜಾ ಸೇರಿ ಹಲವು ಆಟಗಾರರ ಜತೆ ಯುವ ಆಟಗಾರರು ಅಭ್ಯಾಸ ನಡೆಸಿದ್ದಾರೆ.

ಬುಧವಾರ ಆರಂಭಿಕ ಹಂತದಲ್ಲಿ ಫುಟ್ಬಾಲ್‌ ಆಡಿದ ಆಟಗಾರರು ಆ ಬಳಿಕ ಹೆಚ್ಚುವರಿ ಬ್ಯಾಟಿಂಗ್‌ ಅಭ್ಯಾಸಕ್ಕೆ ಒತ್ತುಕೊಟ್ಟರು. ಗುರುವಾರ ಕೂಡ ಫಾರ್ಮ್‌ ಕಳೆದುಕೊಂಡಿರುವ ವಿರಾಟ್‌ ಕೊಹ್ಲಿ, ರಾಹುಲ್‌ ಹೆಚ್ಚುವರಿ ಬ್ಯಾಟಿಂಗ್‌ ಅಭ್ಯಾಸ ನಡೆಸಲಿದ್ದಾರೆ. ಟೆಸ್ಟ್​ ತಂಡದ ಆಟಗಾರರಿಗೆ ಭಾರತ ಎ ತಂಡದ ಆಟಗಾರು ಅಭ್ಯಾಸದಲ್ಲಿ ನೆರವಾದರು. ವೈಯಕ್ತಿಕ ಕಾರಣದಿಂದ ಆಸೀಸ್‌ಗೆ ತೆರಳದ ನಾಯಕ ರೋಹಿತ್‌ ಶರ್ಮ ಮುಂಬೈಯಲ್ಲೇ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದಾರೆ. ಶುಕ್ರವಾರದಿಂದ ಭಾನುವಾರದವರೆಗೆ ವಾಕಾ ಗ್ರೌಂಡ್​ನಲ್ಲಿ ಭಾರತ ಎ ತಂಡದೊಂದಿಗೆ ತ್ರಿದಿನ ಅಭ್ಯಾಸ ಪಂದ್ಯ ಆಡಲಿದೆ. ಈ ಪಂದ್ಯಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲು ಟೀಮ್​ ಮ್ಯಾನೇಜ್​ಮೆಂಟ್​ ನಿರ್ಧರಿಸಿದೆ.

ಭಾರತ ಎ ನಡುವೆ ನಿಗದಿಯಾಗಿದ್ದ ಅಭ್ಯಾಸ ಪಂದ್ಯವನ್ನು ಈ ಮುನ್ನ ಟೀಮ್​ ಮ್ಯಾನೇಜ್​ಮೆಂಟ್ ರದ್ದುಗೊಳಿಸಿತ್ತು. ಇದರ ಬದಲಾಗಿ ಹೆಚ್ಚುವರಿ ಬ್ಯಾಟಿಂಗ್‌ ನಡೆಸಲು ಕೋಚ್‌ ಮತ್ತು ಹಿರಿಯ ಆಟಗಾರರು ಬಯಸಿದ್ದರು. ಇದೀಗ ಅಭ್ಯಾಸ ಪಂದ್ಯ ಮರುನಿಗದಿಪಡಿಸಲಾಗಿದೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿ ತವರಿನಲ್ಲೇ ಉಳಿದುಕೊಂಡಿರುವ ನಾಯಕ ರೋಹಿತ್​ ಶರ್ಮ ಮುಂಬೈನಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ. ಅವರ ಆಸೀಸ್​ ಪ್ರಯಾಣ ದಿನಾಂಕ ಕೂಡ ಇನ್ನೂ ಖಚಿತವಾಗಿಲ್ಲ. ರೋಹಿತ್ ಸದ್ಯ​ ರಿಲಯನ್ಸ್​ ಕಾರ್ಪೊರೇಟ್​ ಪಾರ್ಕ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದ್ದಾರೆ. ಒಂದೊಮ್ಮೆಅವರು ಮೊದಲ ಪಂದ್ಯಕ್ಕೆ ಅಲಭ್ಯರಾದರೆ ಅವರ ಅನುಪಸ್ಥಿತಿಯಲ್ಲಿ ವೇಗಿ ಜಸ್‌ಪ್ರೀತ್‌ ಬುಮ್ರಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಈಗಾಗಲೇ ಕೋಚ್‌ ಗಂಭೀರ್‌ ಖಚಿತಪಡಿಸಿದ್ದಾರೆ.

ಮೊದಲ ಪಂದ್ಯ(IND vs AUS) ನಡೆಯಲಿರುವ ಪರ್ತ್‌ನ ಓಪ್ಟಸ್‌ ಕ್ರೀಡಾಂಗಣದ(Optus Stadium) ಪಿಚ್‌ ಹೆಚ್ಚು ವೇಗ ಹಾಗೂ ಬೌನ್ಸಿಯಿಂದ(Perth pitch report) ಕೂಡಿರಲಿದೆ ಎಂದು ವೆಸ್ಟರ್ನ್ ಆಸ್ಟ್ರೇಲಿಯಾ ಕ್ರಿಕೆಟ್‌ (ಡಬ್ಲ್ಯುಎಸಿಎ) ಮುಖ್ಯ ಕ್ಯೂರೇಟರ್ ಐಸಾಕ್ ಮೆಕ್‌ಡೊನಾಲ್ಡ್‌ ಹೇಳಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪಾಕಿಸ್ತಾನ ಎದುರಿನ ಟೆಸ್ಟ್‌ ಪಂದ್ಯಕ್ಕೆ ನೀಡಲಾಗಿದ್ದ ಮಾದರಿಯ ಪಿಚ್‌ ಅನ್ನೇ ಈಗಲೂ ಸಿದ್ಧಪಡಿಸಲಾಗುತ್ತಿದೆ ಎನ್ನಲಾಗಿದೆ.