ನವದೆಹಲಿ: ಭಾರತ ತಂಡದ ಭವಿಷ್ಯದ ನಾಯಕನಾಗುವ ಎಲ್ಲಾ ಸಾಮರ್ಥ್ಯ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾಗೆ ಇದೆ ಎಂದು ಮಿಸ್ಟರ್ ಐಪಿಎಲ್ ಖ್ಯಾತಿಯ ಸುರೇಶ್ ರೈನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನವೆಂಬರ್ 22 ರಂದು ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ (IND vs AUS) ಚಾಲನೆ ದೊರೆಯಲಿದ್ದು, ಭಾರತದ ನಾಯಕ ರೋಹಿತ್ ಶರ್ಮಾ ಪರ್ತ್ ಟೆಸ್ಟ್ನಿಂದ ಬಹುತೇಕ ಹೊರಗುಳಿಯುವ ಸಾಧ್ಯತೆಯಿದ್ದು, ಉಪನಾಯಕ ಬುಮ್ರಾ ಅವರೇ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ ಎಂದು ಹೆಡ್ ಕೋಚ್ ಗೌತಮ್ ಗಂಭೀರ್ ಸುಳಿವು ನೀಡಿರುವ ಬೆನ್ನಲ್ಲೇ ಮಾಜಿ ಆಲ್ರೌಂಡರ್ ರೈನಾ ತಮ್ಮದೇ ಆದ ಹೇಳಿಕೆಯನ್ನು ನೀಡಿದ್ದಾರೆ.
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-3 ಅಂತರದಲ್ಲಿ ವೈಟ್ವಾಷ್ ಆಘಾತ ಅನುಭವಿಸಿರುವ ಟೀಮ್ ಇಂಡಿಯಾ, ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸುತ್ತು ಪ್ರವೇಶಿಸಲು ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ಕನಿಷ್ಠ 4ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಆದರೆ ಆಸ್ಟ್ರೇಲಿಯಾದಲ್ಲಿ ಭಾರತ 4 ಪಂದ್ಯಗಳನ್ನು ಗೆಲ್ಲುವುದು ಅಷ್ಟೊಂದು ಸುಲಭವಲ್ಲ.
IND vs AUS: ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮಿನ್ಸ್ ಬೌಲಿಂಗ್ಗೆ ಆಡುವುದು ಕಷ್ಟ ಎಂದ ಜೇಸನ್ ಗಿಲೆಸ್ಪಿ!
ಬುಮ್ರಾರಲ್ಲಿ ಉತ್ತಮ ನಾಯಕತ್ವವಿದೆ: ಸುರೇಶ್ ರೈನಾ
ಟೈಮ್ಸ್ ಆಫ್ ಇಂಡಿಯಾ ಜೊತೆ ಸಂವಾದ ನಡೆಸಿರುವ ಸುರೇಶ್ ರೈನಾ, ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅವರಲ್ಲಿ ಉತ್ತಮ ನಾಯಕತ್ವದ ಗುಣಗಳಿವೆ. ಪರ್ತ್ ಟೆಸ್ಟ್ನಲ್ಲಿ ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಸಾಬೀತುಪಡಿಸಲು ಬುಮ್ರಾಗೆ ಉತ್ತಮ ವೇದಿಕೆ ಸಿಗಲಿದೆ ಎಂದು ಹೇಳಿದ್ದಾರೆ.
“ಜಸ್ಪ್ರೀತ್ ಅವರಿಗೆ ನಿಜಕ್ಕೂ ಇದೊಂದು ಉತ್ತಮ ಅವಕಾಶವಾಗಿದೆ. ಅವರಲ್ಲಿ ಕ್ರಿಕೆಟ್ ಕುರಿತು ಅಪಾರ ಕೌಶಲ ಹಾಗೂ ಉತ್ತಮ ನಾಯಕತ್ವ ಗುಣವಿದೆ ಎಂಬುದು ನನ್ನ ಅನಿಸಿಕೆ. ಅಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಗೌತಮ್ ಭಾಯ್ ಕೂಡ ಬುಮ್ರಾ ಅವರಲ್ಲಿ ಪ್ರಬುದ್ಧ ನಾಯಕತ್ವ ಗುಣವಿದೆ ಎಂದು ಹೇಳಿದ್ದಾರೆ. ಅಲ್ಲದೆ ಬುಮ್ರಾ ವಿಶೇಷ ಆಟಗಾರ. ಪ್ಯಾಟ್ ಕಮಿನ್ಸ್ ಅವರನ್ನು ನೀವು ಗಮನಿಸಿದರೆ, ಅವರು ಎರಡು ವಿಶ್ವಕಪ್ ಟೂರ್ನಿಯನ್ನು ತಮ್ಮ ಕ್ಯಾಪ್ಟನ್ಸಿಯಲ್ಲಿ ಗೆದ್ದಿರುವುದಲ್ಲದೆ, ತಾನೊಬ್ಬ ಪ್ರಬುದ್ಧ ಆಟಗಾರ ಎಂಬುದನ್ನು ಸಾಬೀತುಪಡಿಸಿದ್ದಾರೆ,” ಎಂದು ಸುರೇಶ್ ರೈನಾ ತಿಳಿಸಿದ್ದಾರೆ.
ICC Test Rankings: ಅಗ್ರಸ್ಥಾನ ಕಳೆದುಕೊಂಡ ಜಸ್ಪ್ರೀತ್ ಬುಮ್ರಾ
ಬುಮ್ರಾಗೆ ಉತ್ತಮ ಅವಕಾಶ ಸಿಕ್ಕಿದೆ
“ಜಸ್ಪ್ರೀತ್ ಬುಮ್ರಾ ಅವರಲ್ಲೂ ಕೂಡ ಪ್ಯಾಟ್ ಕಮಿನ್ಸ್ ಅವರಂತೆಯೇ ಉತ್ತಮ ನಾಯಕತ್ವದ ಗುಣಗಳು ಅಡಗಿದೆ ಎಂಬುದು ನನ್ನ ಭಾವನೆ. ಬುಮ್ರಾಗೆ ಈಗ ಸಿಕ್ಕಿರುವ ಅವಕಾಶವನ್ನು ನನ್ನ ದೃಷ್ಟಿಕೋನದಿಂದ ವಿಶ್ಲೇಷಿಸುವುದಾದರೆ ಅದು ಉತ್ತಮ ಬೆಳವಣಿಗೆಯಾಗಿದೆ. ಪರ್ತ್ ಟೆಸ್ಟ್ನಲ್ಲಿ ಬುಮ್ರಾ ಒತ್ತಡ ನಿವಾರಿಸಿ ಗೆಲುವು ಸಾಧಿಸಿದರೆ, ಟೀಮ್ ಇಂಡಿಯಾಗೆ ಟೆಸ್ಟ್ ಕ್ರಿಕೆಟ್ನಲ್ಲಿ ಭವಿಷ್ಯದ ನಾಯಕ ಸಿಕ್ಕದಂತಾಗುತ್ತದೆ,” ಎಂದು ಮಾಜಿ ಆಲ್ರೌಂಡರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುವ ಭಾರತವನ್ನು ಮುನ್ನಡೆಸಿದ್ಧ ಬುಮ್ರಾ
ಇತ್ತೀಚೆಗೆ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್, ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ ಎಂಬ ಸುಳಿವು ನೀಡಿದ್ದರು. ಅಲ್ಲದೆ ಈ ಹಿಂದೆ ಬುಮ್ರಾಗೆ ತಂಡವನ್ನು ಮುನ್ನಡೆಸಿರುವ ಅನುಭವವೂ ಇದೆ. 2022ರಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ತಂಡವನ್ನು ಮೊದಲ ಬಾರಿ ಮುನ್ನಡೆಸಿದ್ದರು. ಅಲ್ಲದೆ 2023ರಲ್ಲಿ ಐರ್ಲೆಂಡ್ ವಿರುದ್ಧ ನಡೆದಿದ್ದ ಟಿ20-ಐ ಸರಣಿಯಲ್ಲಿ ಯುವ ಭಾರತ ತಂಡವನ್ನು ಮುನ್ನಡೆಸಿ ಸರಣಿ ಗೆದ್ದಿದ್ದರು.