Thursday, 21st November 2024

IND vs AUS: ಕೆಎಲ್‌ ರಾಹುಲ್‌ ಬಗ್ಗೆ ಸಕಾರಾತ್ಮಕ ಅಂಶ ಬಹಿರಂಗಪಡಿಸಿದ ಸುನೀಲ್‌ ಗವಾಸ್ಕರ್!

IND vs AUS:‌ KL Rahul will have no issue with scoring in Australia: Sunil Gavaskar

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ (IND vs AUS) ರನ್‌ ಗಳಿಸಲು ಟೀಮ್‌ ಇಂಡಿಯಾ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ಗೆ ಯಾವುದೇ ಸಮಸ್ಯೆ ಇಲ್ಲವೆಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ವಿರುದ್ಧದ ತವರು ಟೆಸ್ಟ್‌ ಸರಣಿಗಳಲ್ಲಿ ಕನ್ನಡಿಗ ಕೆಎಲ್‌ ರಾಹುಲ್‌ ರನ್‌ ಗಳಿಸಲು ಪರದಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಕೆಲ ಪಂದ್ಯಗಳಲ್ಲಿ ಬೆಂಚ್‌ ಕಾದಿದ್ದರು.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಶುಕ್ರವಾರ ಪರ್ತ್‌ನಲ್ಲಿ ಆರಂಭವಾಗಲಿದೆ. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಮೊದಲನೇ ಟೆಸ್ಟ್‌ ಪಂದ್ಯಕ್ಕೆ ನಾಯಕ ರೋಹಿತ್‌ ಶರ್ಮಾ ಅಲಭ್ಯರಾಗಿದ್ದಾರೆ. ಹಾಗಾಗಿ ಅವರ ಸ್ಥಾನದಲ್ಲಿ ಕೆಎಲ್‌ ರಾಹುಲ್‌ ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್‌ ಜೊತೆ ಇನಿಂಗ್ಸ್‌ ಆರಂಭಿಸಲಿದ್ದಾರೆ.

2023ರಲ್ಲಿ ದಕ್ಷಿಣ ಆಫ್ರಿಕಾದ ಸೆಂಚುರಿಯನ್‌ನಲ್ಲಿ ಕೆಎಲ್ ರಾಹುಲ್ ತಮ್ಮ ಕೊನೆಯ ಟೆಸ್ಟ್‌ ಶತಕವನ್ನು ಸಿಡಿಸಿದ್ದರು. ಆದರೆ, ಅವರು ಇಲ್ಲಿಯವರೆಗೂ 53 ಟೆಸ್ಟ್ ಪಂದ್ಯಗಳನ್ನು ಆಡಿದ್ದರೂ ಅವರ ಪ್ರದರ್ಶನ ಸ್ಥಿರವಾಗಿಲ್ಲ. ಭಾರತದ ಪರ ಓಪನರ್‌ ಆಗಿ ಅವರು 2500ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದಾರೆ. ಪರ್ತ್‌ ಟೆಸ್ಟ್‌ನಲ್ಲಿ ಕೆಎಲ್‌ ರಾಹುಲ್‌ ಮೇಲೆ ಸುನೀಲ್‌ ಗವಾಸ್ಕರ್‌ ವಿಶ್ವಾಸವನ್ನು ಹೊಂದಿದ್ದಾರೆ.‌

IND vs AUS: ʻತಂಡ ನನಗೆ ಮೊದಲುʼ-ಟೀಕಾಕಾರರಿಗೆ ಕೆಎಲ್‌ ರಾಹುಲ್‌ ತಿರುಗೇಟು!

ಕೆಎಲ್‌ ರಾಹುಲ್‌ಗೆ ಸುನೀಲ್‌ ಗವಾಸ್ಕರ್‌ ಬೆಂಬಲ

ಸರಣಿಗೂ ಮುನ್ನ ಮಾಧ್ಯಮ ಸಂಸ್ಥೆಯೊಂದಿಗೆ ಮಾತನಾಡಿದ ಸುನೀಲ್‌ ಗವಾಸ್ಕರ್, “ಕೆಎಲ್‌ ರಾಹುಲ್ ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ್ದನ್ನು ನಾನು ನೋಡಿದ್ದೇನೆ ಹಾಗೂ ನಾನು ನೋಡಿದ ಅತ್ಯುತ್ತಮ ಶತಕಗಳಲ್ಲಿ ಇದು ಕೂಡ ಒಂದಾಗಿದೆ. ಹಾಗಾಗಿ ಇಲ್ಲಿಯೂ ಅದೇ ರೀತಿಯ ಲಯವನ್ನು ಅವರು ಮುಂದುವರಿಸಬಹುದು. ಇದಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಎಲ್ಲಾ ಬ್ಯಾಟ್ಸ್‌ಮನ್‌ಗಳಂತೆ ಅವರಿಗೂ ಆರಂಭದಲ್ಲಿ ಅದೃಷ್ಟ ಬೇಕು, ಅದು ಸಿಕ್ಕರೆ ತಂಡಕ್ಕೆ ಉತ್ತಮ ಆರಂಭ ನೀಡಬಹುದು,” ಎಂದು ತಿಳಿಸಿದ್ದಾರೆ.

“ಬ್ಯಾಟ್ಸ್‌ಮನ್‌ಗಳು ಈ ಹಿಂದೆ ತಾವು ಎದುರಿಸಿದ್ದ ಎಸೆತಗಳಿಗೆ ತರಬೇತಿ ಪಡೆಯುವುದನ್ನು ಮರೆತು ಬಿಡುತ್ತಾರೆ ಹಾಗೂ ಮುಂದಿನ ಎಸೆತಗಳ ಕಡೆಗೆ ಗಮನವನ್ನು ಕೊಡುತ್ತಾರೆ. ಹಾಗಾಗಿ ಈ ಹಿಂದಿನ ಪಂದ್ಯದಲ್ಲಿ ಏನಾಗಿತ್ತು ಅದರ ಕಡೆಗೆ ಮೊದಲು ಗಮನ ಕೊಡಬೇಕು ಹಾಗೂ ಮುಂದಿನ ಪಂದ್ಯಗಳಲ್ಲಿ ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಳ್ಳಬೇಕು,” ಎಂದು ಸುನೀಲ್‌ ಗವಾಸ್ಕರ್‌ ಸಲಹೆ ನೀಡಿದ್ದಾರೆ.

BGT 2024-25: ಜೈಸ್ವಾಲ್‌-ರಾಹುಲ್‌ ಓಪನರ್ಸ್‌, ಭಾರತದ ಪ್ಲೇಯಿಂಗ್‌ XI ಆರಿಸಿದ ಆಕಾಶ್‌ ಚೋಪ್ರಾ!

ಪಿಚ್ ಹೇಗೆ ವರ್ತಿಸಿದರೂ ಟೆಸ್ಟ್ ಪಂದ್ಯಕ್ಕೆ ನಿಮ್ಮ ಉತ್ತಮ ಬೌಲರ್‌ಗಳನ್ನು ಆಯ್ಕೆ ಮಾಡಬೇಕು ಎಂದು ನಾನು ನಂಬುತ್ತೇನೆ ಎಂದು ಗವಾಸ್ಕರ್ ಹೇಳಿದ್ದಾರೆ. ಅಶ್ವಿನ್ ಮತ್ತು ಜಡೇಜಾ ಅವರಂತಹ ಬೌಲರ್‌ಗಳು ಒಟ್ಟಾಗಿ ಸುಮಾರು 900 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಒಟ್ಟಿಗೆ ಅರ್ಧ ಡಜನ್‌ಗಿಂತಲೂ ಹೆಚ್ಚು ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ.

“ಇಂಥಾ ಅನುಭವಿಗಳನ್ನು ಹೊಂದಿರುವ ಈ ತಂಡ, ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯುವ ಆಟಗಾರರಿಗೆ ಉತ್ತಮ ಹಾದಿಯಲ್ಲಿ ಮಾರ್ಗದರ್ಶನವನ್ನು ನೀಡಬೇಕಾಗುತ್ತದೆ. ಅದು ಬಿಟ್ಟು ಈ ಹಿಂದೆ ಏನು ನಡೆಯಿತು ಎಂಬುದರ ಬಗ್ಗೆ ಜಾಸ್ತಿ ಯೋಚನೆ ಮಾಡಬಾರದು,” ಎಂದು ಸುನೀಲ್‌ ಗವಾಸ್ಕರ್‌ ಒತ್ತಿ ಹೇಳಿದ್ದಾರೆ.