Friday, 15th November 2024

IND vs AUS: ಬಾರ್ಡರ್‌-ಗವಾಸ್ಕರ್‌ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟರ್ಸ್‌!

IND vs AUS: List of Top 5 Batters with Most Runs in Border Gavaskar Trophy Till 2024

ನವದೆಹಲಿ: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ (IND vs AUS) ನಡುವಣ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಗೆ ಇನ್ನು ಕೇವಲ 10 ದಿನಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ಮಹತ್ವದ ಟೆಸ್ಟ್‌ ಸರಣಿಗೆ ಸಜ್ಜಾಗುತ್ತಿವೆ. ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವನ್‌ ಸ್ಮಿತ್‌, ಉಸ್ಮಾನ್‌ ಖವಾಜ, ಮಾರ್ನಸ್‌ ಲಾಬುಶೇನ್‌, ಟ್ರಾವಿಸ್‌ ಹೆಡ್‌ ಪ್ರಮುಖ ಬ್ಯಾಟ್ಸ್‌ಮನ್‌ಗಳಾದರೆ, ಭಾರತ ತಂಡದಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ರಿಷಭ್‌ ಪಂತ್‌, ಕೆಎಲ್‌ ರಾಹುಲ್‌ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ.

ಉಭಯ ತಂಡಗಳ ನಡುವಣ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯು ತನ್ನದೇ ಆದ ಮಹತ್ವವನ್ನು ಹೊಂದಿದೆ. ಈ ಟೆಸ್ಟ್‌ ಸರಣಿಯಲ್ಲಿ ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ವಿವಿಎಸ್‌ ಲಕ್ಷ್ಮಣ್‌, ರಿಕಿ ಪಾಂಟಿಂಗ್‌, ಮೈಕಲ್‌ ಕ್ಲಾರ್ಕ್‌ ಅವರಂಥ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಆಡಿದ್ದಾರೆ ಹಾಗೂ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅಂದ ಹಾಗೆ ಬಿಜಿಟಿ ಟೆಸ್ಟ್‌ ಸರಣಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳ ಬಗ್ಗೆ ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

  1. ಸಚಿನ್‌ ತೆಂಡೂಲ್ಕರ್‌ (3,262ರನ್‌)

ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸಚಿನ್‌ ತೆಂಡೂಲ್ಕರ್‌ ಅಗ್ರ ಸ್ಥಾನದಲ್ಲಿದ್ದಾರೆ. ಇವರು ಆಡಿದ 34 ಪಂದ್ಯಗಳ 65 ಇನಿಂಗ್ಸ್‌ಗಳಿಂದ 56.24ರ ಸರಾಸರಿಯಲ್ಲಿ 9 ಶತಕಗಳು ಹಾಗೂ 16 ಅರ್ಧಶತಕಗಳ ಮೂಲಕ 3,262 ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಈ ಟೆಸ್ಟ್‌ ಸರೆಣಿಯ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

  1. ರಿಕಿ ಪಾಂಟಿಂಗ್‌ (2555 ರನ್‌)

ಸಚಿನ್‌ ತೆಂಡೂಲ್ಕರ್‌ ಬಳಿಕ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಎರಡನೇ ಸ್ಥಾನದಲ್ಲಿದ್ದಾರೆ. ಬಿಜಿಟಿ ಇತಿಹಾಸದಲ್ಲಿ ರಿಕಿ ಪಾಂಟಿಂಗ್‌ ಆಡಿದ 29 ಪಂದ್ಯಗಳ 51ಇನಿಂಗ್ಸ್‌ಗಳಿಂದ 54.36ರ ಸರಾಸರಿಯಲ್ಲಿ 2555 ರನ್‌ಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಅವರು 8 ಶತಕಗಳು ಹಾಗೂ 12 ಅರ್ಧಶತಕಗಳನ್ನು ಸಿಡಿಸಿದ್ದಾರೆ.

  1. ವಿವಿಎಸ್‌ ಲಕ್ಷ್ಮಣ್‌ (2,434 ರನ್‌)

ಭಾರತ ಟೆಸ್ಟ್‌ ತಂಡದ ಮಾಜಿ ಬ್ಯಾಟ್ಸ್‌ಮನ್‌ ವಿವಿಎಸ್‌ ಲಕ್ಷ್ಮಣ್‌ ಅವರು ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಹೈದರಾಬಾದ್‌ ಮೂಲದ ಮಾಜಿ ಬ್ಯಾಟ್ಸ್‌ಮನ್‌ 29 ಪಂದ್ಯಗಳ 54 ಇನಿಂಗ್ಸ್‌ಗಳಿಂದ 49.67ರ ಸರಾಸರಿಯಲ್ಲಿ 2,434 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಇವರು ಆರು ಶತಕಗಳು ಹಾಗೂ 12 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಬಿಜಿಟಿ ಇತಿಹಾಸದಲ್ಲಿಯೇ ವಿವಿಎಸ್‌ ಲಕ್ಷ್ಮಣ್‌ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ.

  1. ರಾಹುಲ್‌ ದ್ರಾವಿಡ್‌ (2143 ರನ್‌)

ಭಾರತೀಯ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ರಾಹುಲ್‌ ದ್ರಾವಿಡ್‌ ಕೂಡ ಒಬ್ಬರಾಗಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ದ್ರಾವಿಡ್‌ ಅವರು ಅತ್ಯುತ್ತಮ ಅಂಕಿಅಂಶಗಳನ್ನು ಹೊಂದಿದ್ದಾರೆ. ಅವರು ಆಡಿದ 32 ಪಂದ್ಯಗಳ 60 ಇನಿಂಗ್ಸ್‌ಗಳಿಂದ 2,143ರನ್‌ಗಳನ್ನು ಕಲೆ ಹಾಕಿದ್ದಾರೆ. ಆ ಮೂಲಕ ಈ ಸಾಲಿನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದ್ದಾರೆ.

  1. ಮೈಕಲ್‌ ಕ್ಲಾರ್ಕ್‌ (2049 ರನ್‌)

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಈ ಸಾಲಿನಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇವರು ಆಸೀಸ್‌ ಪರ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಆಡಿದ 22 ಪಂದ್ಯಗಳ 40 ಇನಿಂಗ್ಸ್‌ಗಳಿಂದ 53.92ರ ಸರಾಸರಿಯಲ್ಲಿ 2049 ರನ್‌ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಅವರು 7 ಶತಕಗಳು ಹಾಗೂ 6 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS: ರೋಹಿತ್‌ ಅಲಭ್ಯರಾದರೆ ಬುಮ್ರಾ ನಾಯಕ; ಕೋಚ್‌ ಗಂಭೀರ್‌