Wednesday, 11th December 2024

IND vs AUS: ಆಸ್ಟ್ರೇಲಿಯಾಗೆ ತೆರಳಲು ವೇಗಿ ಮೊಹಮ್ಮದ್‌ ಶಮಿ ಸಜ್ಜು! ವರದಿ

IND vs AUS: Mohammed Shami to participate in last two BGT Tests, to leave for Australia after SMAT

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ (IND vs AUS) ಸರಣಿಯ ಕೊನೆಯ ಎರಡು ಪಂದ್ಯಗಳನ್ನು ಆಡಲು ಕೊನೆಯ ಕ್ಷಣದಲ್ಲಿ ಮೊಹಮ್ಮದ್ ಶಮಿ ಭಾರತ ತಂಡದಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ಬಂಗಾಳ ತಂಡದ ವೇಗದ ಬೌಲರ್ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆಂದು ವರದಿಯಾಗಿದೆ. ಗಬ್ಬಾದಲ್ಲಿ ನಡೆಯುವ ಮೂರನೇ ಟೆಸ್ಟ್‌ನಲ್ಲಿ ಆಡಲು ಸಾಧ್ಯವಾಗದಿದ್ದರೂ, ಅವರು ನಾಲ್ಕನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆಂದು ಹೇಳಲಾಗುತ್ತಿದೆ. ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ಗೂ ಮುನ್ನ ಶಮಿ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆಂದು ವರದಿಯಾಗಿದೆ.

“ಪ್ರಸ್ತುತ ಪ್ರಸ್ತುತ ಮೊಹಮ್ಮದ್‌ ಶಮಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ ಹಾಗೂ ಅವರು ಸಂಪೂರ್ಣ ಫಿಟ್ನೆಸ್‌ಗೆ ಮರಳಿದ್ದಾರೆ. ಅವರಿಗೆ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿ ಫಿಟ್ನೆಸ್‌ ಪ್ರಮಾಣ ಪತ್ರವನ್ನು ನೀಡಿದರೆ, ಅವರು ಭಾರತ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಅಂದ ಹಾಗೆ ಈಗಾಗಲೇ ಶಮಿ ಅವರ ಕಿಟ್‌ ಬ್ಯಾಗ್‌ ಅನ್ನು ಆಸ್ಟ್ರೇಲಿಯಾಗೆ ರವಾನಿಸಲಾಗಿದೆ,” ಎಂದು ಆಪ್ತ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ರಣಜಿ ಟ್ರೋಫಿ ಟೂರ್ನಿಯಲ್ಲಿ ಮೊಹಮ್ಮದ್‌ ಶಮಿ ಮಿಂಚಿನ ಬೌಲಿಂಗ್‌ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ತಾವು ಸಂಪೂರ್ಣ ಫಿಟ್‌ ಇರುವುದಾಗಿ ಹಿರಿಯ ವೇಗಿ ಸಾಬೀತುಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಅವರನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ಭಾರತ ತಂಡಕ್ಕೆ ಸೇರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಆದರೆ, ಇದರ ಬದಲಿಗೆ ಶಮಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಂಗಾಳದ ಪರವಾಗಿ ಆಡಲು ಭಾರತದಲ್ಲಿಯೇ ಉಳಿದುಕೊಂಡರು. ಡಿಸೆಂಬರ್ 9 ರಂದು ಚಂಡೀಗಢ ವಿರುದ್ಧ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಂಗಾಳ ತಂಡದ ಪರ ಶಮಿ ಆಡಲಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿ ಫೈನಲ್ ಡಿಸೆಂಬರ್ 15 ರಂದು ನಡೆಯಲಿದೆ. ಬಂಗಾಳ ತಂಡ ಫೈನಲ್ ತಲುಪಿದರೆ, ಆ ಪಂದ್ಯದ ಆಡಿದ ಬಳಿಕ ಸ್ಟಾರ್ ವೇಗಿ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಬಹುದು.

2023ರ ಏಕದಿನ ವಿಶ್ವಕಪ್‌ ಆಡಿದ್ದ ಶಮಿ

34ರ ವಯಸ್ಸಿನ ವೇಗದ ಬೌಲರ್‌ ಮೊಹಮ್ಮದ್‌ ಶಮಿ 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡವನ್ನು ಕೊನೆಯ ಬಾರಿ ಪ್ರತಿನಿಧಿಸಿದ್ದಾರೆ. ಗಾಯದ ಹೊರತಾಗಿಯೂ ಅವರು ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದರು. ಆದರೆ, ಈ ಟೂರ್ನಿಯ ಬಳಿಕ ಶಮಿ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ವಿರಾಮ ಪಡೆದು ಪಾದದ ಶಸ್ತ್ರ ಚಿಕಿತ್ಸೆಯನ್ನು ಪಡೆದಿದ್ದರು. ಇದೀಗ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡಲು ಎದುರು ನೋಡುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: IND vs AUS 2nd Test: ಟ್ರಾವಿಸ್‌ ಹೆಡ್‌ ಶತಕ, ಎರಡನೇ ದಿನವೂ ಭಾರತಕ್ಕೆ ಹಿನ್ನಡೆ!