Thursday, 12th December 2024

IND vs AUS: ಮೊಹಮ್ಮದ್‌ ಸಿರಾಜ್‌ಗೆ ದಂಡ ವಿಧಿಸಬೇಕಿತ್ತೆಂದ ಮೈಕಲ್‌ ಕ್ಲಾರ್ಕ್‌!

IND vs AUS: 'Mohammed Siraj should be fined for keeping on appealing for lbw', says Michael Clarke

ಅಡಿಲೇಡ್‌: ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಎರಡನೇ ಹಾಗೂ ಅಡಿಲೇಡ್‌ ಟೆಸ್ಟ್‌ (IND vs AUS) ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ ಅವರ ವರ್ತನೆಯನ್ನು ಆಸೀಸ್‌ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಖಂಡಿಸಿದ್ದಾರೆ ಹಾಗೂ ಬಲಗೈ ವೇಗಿಗೆ ಐಸಿಸಿ ದಂಡವನ್ನು ವಿಧಿಸಬೇಕೆಂದು ಮಾಜಿ ಕಿಕೆಟಿಗ ಆಗ್ರಹಿಸಿದ್ದಾರೆ. ಅಂದ ಹಾಗೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 10 ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.

ಈ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ ಹಾಗೂ ಟ್ರಾವಿಸ್‌ ಹೆಡ್‌ ಅವರ ನಡುವೆ ನಡೆದಿದ್ದ ಘಟನೆ ಎಲ್ಲರ ಗಮನ ಸೆಳೆದಿತ್ತು. ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಟ್ರಾವಿಸ್‌ ಹೆಡ್‌ 141 ಎಸೆತಗಳಲ್ಲಿ 140 ರನ್‌ಗಳನ್ನು ಸಿಡಿಸಿ ಆಡುತ್ತಿದ್ದರು. ಆದರೆ, ಮೊಹಮ್ಮದ್‌ ಸಿರಾಜ್‌ ಅವರ ಯಾರ್ಕರ್‌ ಎಸೆತದಲ್ಲಿ ಹೆಡ್‌ ಕ್ಲೀನ್‌ ಬೌಲ್ಡ್‌ ಆಗಿದ್ದರು. ಈ ವೇಳೆ ಟ್ರಾವಿಸ್‌ ಹೆಡ್‌ ಎದುರು ಟೀಮ್‌ ಇಂಡಿಯಾ ವೇಗಿ ಆಕ್ರಮಣಕಾರಿಯಾಗಿ ವರ್ತಿಸಿದ್ದರು. ಈ ವೇಳೆ ಸಿರಾಜ್‌ ಹಾಗೂ ಹೆಡ್‌ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು.

ಪಂದ್ಯದ ಎರಡನೇ ದಿನದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಟ್ರಾವಿಸ್‌ ಹೆಡ್‌, ಮೊಹಮ್ಮದ್‌ ಸಿರಾಜ್‌ಗೆ ನಾನು ಬೌಲಿಂಗ್‌ ಚೆನ್ನಾಗಿದೆ ಎಂದು ಹೇಳಿದ್ದೆ. ಆದರೆ, ಅವರು ನನ್ನ ಪದಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಆದರೆ, ಆಟದಲ್ಲಿ ಸ್ಲೆಡ್ಜಿಂಗ್‌ ಎಲ್ಲವೂ ಸಾಮಾನ್ಯ ಎಂದಿದ್ದರು. ಆದರೆ, ಮೂರನೇ ದಿನ ಬ್ಯಾಟಿಂಗ್‌ಗೆ ಬಂದಿದ್ದ ಮೊಹಮ್ಮದ್‌ ಸಿರಾಜ್‌, ಶಾರ್ಟ್‌ ಲೆಗ್‌ನಲ್ಲಿ ನಿಂತಿದ್ದ ಟ್ರಾವಿಸ್‌ ಹೆಡ್‌ ಬಳಿ ತೆರಳಿ ನಿಮ್ಮ ಮಾತುಗಳನ್ನು ನನಗೆ ತಪ್ಪು ಗ್ರಹಿಕೆಯಾಗಿದೆ ಎಂದು ಹೇಳಿದ್ದರು. ಅಲ್ಲಿದೆ, ಸಿರಾಜ್‌ ಮತ್ತು ಹೆಡ್‌ ಅವರ ವಿವಾದಾತ್ಮಕ ಘಟನೆ ಅಂತ್ಯವಾಗಿತ್ತು.

ಮೊಹಮ್ಮದ್‌ ಸಿರಾಜ್‌ಗೆ ದಂಡ ವಿಧಿಸಬೇಕೆಂದ ಮೈಕಲ್‌ ಕ್ಲಾರ್ಕ್‌

ಆದರೆ, ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌, ಮೊಹಮ್ಮದ್‌ ಸಿರಾಜ್‌ ಅವರ ಮೈದಾನದಲ್ಲಿನ ನಡೆಯನ್ನು ಖಂಡಿಸಿದ್ದಾರೆ ಹಾಗೂ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ ದಂಡವನ್ನು ವಿಧಿಸಬೇಕೆಂದು ಆಗ್ರಹಿಸಿದ್ದಾರೆ. ಆದರೆ, ಟ್ರಾವಿಸ್‌ ಹೆಡ್‌ ಅವರ ಘಟನೆಯನ್ನು ಕ್ಲಾರ್ಕ್‌ ಇಲ್ಲಿ ಪರಿಗಣಿಸಿಲ್ಲ. ಇದರ ಬದಲಿಗೆ ಸಿರಾಜ್‌ ಬೌಲಿಂಗ್‌ ವೇಳೆ ಎಲ್‌ಬಿಡಬ್ಲ್ಯು ಬಗೆಗಿನ ತೀರ್ಮಾನದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

“ಮೊಹಮ್ಮದ್‌ ಸಿರಾಜ್‌ ಅವರು ಅಂಪೈರ್‌ಗಳ ಬಳಿ ಕೇಳದೆ ಎಲ್‌ಬಿಡಬ್ಲ್ಯುಗೆ ಪದೇ-ಪದೆ ಅಪೀಲ್‌ ಮಾಡಿದ್ದಾರೆ. ಚೆಂಡು ಬ್ಯಾಟ್ಸ್‌ಮನ್‌ ಪ್ಯಾಡ್‌ಗಳಿಗೆ ತಾಗಿದರೆ, ತಾನೇ ಔಟ್‌ ಎಂದು ನಿರ್ಧರಿಸುತ್ತಿದ್ದರು ಹಾಗೂ ಅಂಪೈರ್‌ಗಳಿಗೆ ಮನವಿ ಮಾಡುತ್ತಿರಲಿಲ್ಲ,” ಎಂದು ಮೈಕಲ್‌ ಕ್ಲಾರ್ಕ್‌ ಭಾರತದ ವೇಗಿಯ ನಡೆಯನ್ನು ಖಂಡಿಸಿದ್ದಾರೆ.

“ಮೊಹಮ್ಮದ್‌ ಸಿರಾಜ್‌ ಅವರ ನಡೆಗೆ ಅಂಪೈರ್‌ಗಳು ದಂಡವನ್ನು ವಿಧಿಸದಿರುವುದು ನನಗೆ ಅಚ್ಚರಿ ಮೂಡಿಸಿದೆ. ಏಕೆಂದರೆ ನಮ್ಮ ಕ್ರಿಕೆಟ್‌ ದಿನಗಳಲ್ಲಿ ಈ ರೀತಿಯ ಘಟನೆಗಳಿಗೆ ಸಾಕಷ್ಟು ಬಾರಿ ದಂಡವನ್ನು ವಿಧಿಸಲಾಗಿದೆ. ಬ್ರೆಟ್‌ ಲೀ ಈ ವಿಷಯದಲ್ಲಿ ಸಾಕಷ್ಟು ತಪ್ಪು ಮಾಡಿದ್ದಾರೆ ಹಾಗೂ ದಂಡವನ್ನು ಕಟ್ಟಿದ್ದಾರೆ,” ಎಂದು ಆಸೀಸ್‌ ಮಾಜಿ ನಾಯಕ ತಿಳಿಸಿದ್ದಾರೆ.

ಅಡಿಲೇಡ್‌ ಟೆಸ್ಟ್‌ ಗೆಲುವಿನ ಬಳಿಕ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಸಾಧಿಸಿವೆ. ಡಿಸೆಂಬರ್‌ 14 ರಂದು ಬ್ರಿಸ್ಬೇನ್‌ನ ದಿ ಗಬ್ಬಾ ನಡೆಯುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸಲಿವೆ.

ಈ ಸುದ್ದಿಯನ್ನು ಓದಿ: IND vs AUS: ಮೊಹಮ್ಮದ್‌ ಸಿರಾಜ್‌-ಟ್ರಾವಿಸ್‌ ಹೆಡ್‌ ನಡುವೆ ಮಾತಿನ ಚಕಮಕಿ! ವಿಡಿಯೊ