Thursday, 12th December 2024

IND vs AUS: ಬಾರ್ಡರ್‌ ಗವಾಸ್ಕರ್‌ ಟ್ರೋಫಿಯಲ್ಲಿ ಮೂಡಿಬಂದ ಟಾಪ್‌ 3 ವಿವಾದಗಳು!

IND vs AUS: 'Mohammed Siraj to Travis Head'-3 Biggest Controversies In Border Gavaskar Trophy History

ನವದೆಹಲಿ: ಪ್ರಸ್ತುತ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಐದು ಪಂದ್ಯಗಳ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (IND vs AUS) ಟೆಸ್ಟ್‌ ಸರಣಿ ನಡೆಯುತ್ತಿದೆ. ಆರಂಭಿಕ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು 1-1 ಸಮಬಲ ಕಾಯ್ದುಕೊಂಡಿವೆ. ಪರ್ತ್‌ ಟೆಸ್ಟ್‌ನಲ್ಲಿ ಭಾರತ ತಂಡ 295 ರನ್‌ಗಳಿಂದ ಭರ್ಜರಿ ಗೆಲುವು ಪಡೆದಿತ್ತು. ಆದರೆ, ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 10 ವಿಕೆಟ್‌ಗಳಿಂದ ಗೆದ್ದು ಟೀಮ್‌ ಇಂಡಿಯಾಗೆ ತಿರುಗೇಟು ನೀಡಿತ್ತು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್‌ ಸರಣಿ ಎಂದ ಮೇಲೆ ಆಟಗಾರರ ನಡುವಣ ಸ್ಲೆಡ್ಜಿಂಗ್‌ ಇದ್ದೇ ಇರುತ್ತದೆ. ಅದರಲ್ಲಿಯೂ ವಿಶೇಷವಾಗಿ ಭಾರತ ತಂಡ, ಆಸ್ಟ್ರೇಲಿಯಾಗೆ ಪ್ರವಾಸ ಮಾಡಿದಾಗ, ಆಟಗಾರರ ಜೊತೆಗೆ ಆಸೀಸ್‌ ಪ್ರೇಕ್ಷಕರು ಕೂಡ ಟೀಮ್‌ ಇಂಡಿಯಾ ಆಟಗಾರರನ್ನು ಸ್ಲೆಡ್ಜ್‌ ಮಾಡುವುದು ಸರ್ವೇ ಸಾಮಾನ್ಯ. ಅದರಂತೆ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲಿಯೂ ಇದು ನಡೆಯಿತು.

ಮೊಹಮ್ಮದ್‌ ಸಿರಾಜ್‌ ಹಾಗೂ ಟ್ರಾವಿಸ್‌ ಹೆಡ್‌ ನಡುವೆ ವಾಗ್ವಾದ ನಡೆದಿತ್ತು. ನಂತರ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಕೂಡ ಸಿರಾಜ್‌ ಅವರನ್ನು ಟ್ರೋಲ್‌ ಮಾಡಿದ್ದರು. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದರ ಪರಿಣಾಮ ಸಿರಾಜ್‌ಗೆ ಪಂದ್ಯದ ಸಂಭಾವನೆಯಲ್ಲಿ ಶೇ. 20ರಷ್ಟು ದಂಡ ಹಾಗೂ ಟ್ರಾವಿಸ್ ಹೆಡ್‌ಗೆ ಎಚ್ಚರಿಕೆ ನೀಡುವ ಮೂಲಕ ಡಿಮೆರಿಟ್‌ ಅಂಕವನ್ನು ನೀಡಲಾಗಿದೆ. ಅಂದ ಹಾಗೆ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಅತ್ಯಂತ ಮೂರು ದೊಡ್ಡ ವಿವಾದಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಹರ್ಭಜನ್‌ ಸಿಂಗ್‌ vs ಆಂಡ್ರ್ಯೂ ಸೈಮಂಡ್ಸ್

    ಭಾರತದ ಸ್ಪಿನ್‌ ದಿಗ್ಗಜ ಹರ್ಭಜನ್ ಸಿಂಗ್ 2007-08ರ ಸಾಲಿನ ಟೆಸ್ಟ್‌ ಸರಣಿಯ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಅವರನ್ನು ಜನಾಂಗೀಯವಾಗಿ ನಿಂದಿಸಿದ್ದರು. ಆಸೀಸ್‌ ಆಲ್‌ರೌಂಡರ್‌ ಅನ್ನು ‘ಮಂಕಿ’ ಎಂದು ಕರೆದಿದ್ದರು. ಈ ಬಗ್ಗೆ ಸೈಮಂಂಡ್ಸ್‌ ಗಂಭೀರ ಆರೋಪ ಮಾಡಿದ್ದರು. ಇದಕ್ಕಾಗಿ ಹರ್ಭಜನ್‌ ಸಿಂಗ್‌ಗೆ ಮೂರು ಪಂದ್ಯಗಳ ನಿಷೇಧವನ್ನು ಹೇರಲಾಗಿತ್ತು. ಆದರೆ, ಭಾರತ ತಂಡದ ಮೇಲ್ಮನವಿ ಮತ್ತು ವಿಚಾರಣೆಯ ನಂತರ ಅದನ್ನು ತೆಗೆದುಹಾಕಲಾಗಿತ್ತು.

    ವಿರಾಟ್‌ ಕೊಹ್ಲಿ vs ಮಿಚೆಲ್‌ ಜಾನ್ಸನ್‌

    2014-15ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಮೊದಲ ಬಾರಿ ಭಾರತ ತಂಡವನ್ನು ಪೂರ್ಣ ಪ್ರಮಾಣದ ನಾಯಕನಾಗಿ ಮುನ್ನಡೆಸಿದ್ದರು. ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಮಿಚೆಲ್‌ ಜಾನ್ಸನ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಪಂದ್ಯದಲ್ಲಿ ಬಾಲ್‌ ಟು ಬಾಲ್‌ ಜಾನ್ಸನ್‌ ಅವರನ್ನು ಕೊಹ್ಲಿ ಸ್ಪೆಡ್ಜ್‌ ಮಾಡಿದ್ದರು. “ಸ್ಟಂಪ್ಸ್‌ಗೆ ಚೆಂಡನ್ನು ಹೊಡೆಯಲು ಪ್ರಯತ್ನಿಸಿ ನನಗಲ್ಲ” ಎಂದು ಜಾನ್ಸನ್‌ಗೆ ಕೊಹ್ಲಿ ಹೇಳಿದ್ದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್‌ ಕೊಹ್ಲಿ, “ಅನಗತ್ಯ ಸಂಭಾಷಣೆ ಅಥವಾ ಅನಗತ್ಯ ಪದಗಳನ್ನು ಬಳಸುವ ಅಗತ್ಯ ನನಗಿಲ್ಲ. ನನಗೆ ಗೌರವ ನೀಡದ ಅನಗತ್ಯ ವ್ಯಕ್ತಿಗಳಿಗೆ ಗೌರವ ನೀಡಲು ನನಗೆ ಯಾವುದೇ ಕಾರಣ ಇಲ್ಲ,” ಎಂದು ಹೇಳಿದ್ದರು.

    ಮೊಹಮ್ಮದ್‌ ಸಿರಾಜ್‌ ವಿರುದ್ಧ ಜನಾಂಗೀಯ ನಿಂದನೆ

      2020-21ರ ಸಾಲಿನ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ವೇಳೆ ಭಾರತ ತಂಡದ ವೇಗಿ ಮೊಹಮ್ಮದ್‌ ಸಿರಾಜ್‌ ಅವರನ್ನು ಜನಾಂಗೀಯವಾಗಿ ನಿಂದಿಸಲಾಗಿತ್ತು. ಸಿಡ್ನಿ ಟೆಸ್ಟ್‌ ಪಂದ್ಯದಲ್ಲಿ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಮೊಹಮ್ಮದ್‌ ಸಿರಾಜ್‌ ಅವರನ್ನು ನಿಂದಿಸಿದ್ದರು. ಇದರಿಂದ ವಿಚಲಿತರಾದ ಸಿರಾಜ್‌ ಕಣ್ಣೀರಿಟ್ಟಿದ್ದರು. ಈ ಘಟನೆಯ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ವಿಷಾದವನ್ನು ವ್ಯಕ್ತಪಡಿಸಿತ್ತು. ಅಂದಿನ ಆಸ್ಟ್ರೇಲಿಯಾ ನಾಯಕ ಟಿಮ್‌ ಪೇನ್‌ ಅವರು, ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. “ಸಿರಾಜ್‌ ತಮ್ಮ ತಂದೆಯ ಅಗಲಿಕೆಯ ನೋವಿನಲ್ಲಿದ್ದಾರೆ. ಇದರ ನಡುವೆ ಈ ಘಟನೆಯಿಂದ ಸಿರಾಜ್‌ ಕಣ್ಣಿನಲ್ಲಿ ನೀರು ನೋಡಿ ನನಗೆ ತುಂಬಾ ನೋವಾಗಿತ್ತು,” ಎಂದು ಸುದ್ದಿಗೋಷ್ಠಿಯಲ್ಲಿ ಅಂದಿನ ಆಸೀಸ್‌ ನಾಯಕ ತಿಳಿಸಿದ್ದರು.

      ಈ ಸುದ್ದಿಯನ್ನು ಓದಿ: IND vs AUS: ಮೊಹಮ್ಮದ್‌ ಸಿರಾಜ್‌-ಟ್ರಾವಿಸ್‌ ಹೆಡ್‌ ನಡುವೆ ಮಾತಿನ ಚಕಮಕಿ! ವಿಡಿಯೊ